ಕನ್ನಡಪ್ರಭ ವಾರ್ತೆ ಬೆಂಗಳೂರು
ಭಿಕ್ಷಾಟನೆಯಲ್ಲಿ ತೊಡಗುವ, ಬೀದಿ ಬದಿ ಆಟಿಕೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳನ್ನು ಪತ್ತೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವ ಸಂಬಂಧ ಸೂಕ್ತ ಶಿಫಾರಸು ನೀಡಲು ರಾಜ್ಯ ಪೊಲೀಸ್, ಮಕ್ಕಳ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನೊಳಗೊಂಡ 12 ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಮಕ್ಕಳು ಬೀದಿ ಬದಿ ಆಟಿಕೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡದಂತೆ ನಿರ್ಬಂಧಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
12 ಸದಸ್ಯರ ಸಮಿತಿ ರಚನೆ:ವಿಚಾರಣೆ ವೇಳೆ ಸರ್ಕಾರಿ ವಕೀಲರು ಉತ್ತರಿಸಿ, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಸಮಸ್ಯೆ ನಿವಾರಣೆಗೆ ಸರ್ಕಾರ ಮಾ.9ರಂದು 12 ಸದಸ್ಯರ ಸಮಿತಿ ರಚಿಸಿದೆ. ಸಮಿತಿಯಲ್ಲಿ ನಿಮ್ಹಾನ್ಸ್‌ನ ತಜ್ಞ ವೈದ್ಯರು, ಪೊಲೀಸ್, ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದಾರೆ. ಆ ಸಮಿತಿ ಮಾ.18ರಂದು ಮೊದಲ ಸಭೆ ನಡೆಸಿ ಹಲವು ವಿಚಾರ ಚರ್ಚಿಸಿದೆ. ಸಮಿತಿ ರಚನೆ ಕುರಿತು ಕನ್ನಡದಲ್ಲಿರುವ ಆದೇಶವನ್ನು ಅನುವಾದಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಪರ ವಕೀಲರು, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳಿಗೆ ನೆರವಾಗಲು ಕ್ರಿಯಾ ಯೋಜನೆ ಸಲ್ಲಿಸುವಂತೆ ಕಳೆದ ಬಾರಿ ನ್ಯಾಯಾಲಯ ನೀಡಿರುವ ಸೂಚನೆಯನ್ನು ಸರ್ಕಾರ ಪಾಲಿಸಿಲ್ಲ ಎಂದು ತಿಳಿಸಿದರು.
ಸರ್ಕಾರಿ ವಕೀಲರು, ಸಂಗ್ರಹ ಮಾಡಿದ ಭಿಕ್ಷುಕರ ಸೆಸ್ ಅನ್ನು ಪ್ರತ್ಯೇಕ ಖಾತೆಯಲ್ಲಿಡಲಾಗುತ್ತಿದೆ. ಅದು ನೇರವಾಗಿ ಮಕ್ಕಳ ಕಲ್ಯಾಣ ಇಲಾಖೆಗೆ ಹೋಗುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿ, ಒಟ್ಟು ₹7 ಕೋಟಿ ಸಂಗ್ರಹ ಮಾಡಲಾಗಿದೆ. ಆದರೆ, ಕೇವಲ ₹3 ಕೋಟಿ ಮಾತ್ರ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆ ವೇಳೆಗೆ ಎಷ್ಟು ಸೆಸ್ ಸಂಗ್ರಹಿಸಲಾಗಿದೆ ಎಂಬ ಸಮಗ್ರ ವಿವರ ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿತು.