ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಕಳೆದ 560ಕ್ಕೂ ಹೆಚ್ಚು ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಮಣಿದಿರುವ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಗುಹನಾಥನ್ ನರೇಂದರ್ ನೇತೃತ್ವದ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಪರಿಶೀಲನಾ ಸಮಿತಿ ಸೆ.30 ಮತ್ತು ಅ.1ರಂದು ರೈತರಿಂದ ಅಹವಾಲು ಸ್ವೀಕರಿಸಲು ಮುಂದಾಗಿದೆ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಕಳೆದ .. ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಮಣಿದಿರುವ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಗುಹನಾಥನ್ ನರೇಂದರ್ ನೇತೃತ್ವದ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಪರಿಶೀಲನಾ ಸಮಿತಿ ಸೆ.30 ಮತ್ತು ಅ.1ರಂದು ರೈತರಿಂದ ಅಹವಾಲು ಸ್ವೀಕರಿಸಲು ಮುಂದಾಗಿದೆ.

ಈ ಎರಡು ದಿನವೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 11.30ರಿಂದ ಸಂಜೆ 4ರವರೆಗೆ ಅಹವಾಲು ಸ್ವೀಕರಿಸುವ ಸ್ಥಳ , ಸಮಯ ಹಾಗೂ ಗ್ರಾಮಗಳ ಹೆಸರು ನಿಗದಿಯಾಗಿದೆ. ಈ ಸಮಿತಿ ಟೌನ್ ಶಿಪ್ ಯೋಜನೆಯ ಕಾನೂನಾತ್ಮಕ, ಮಾನವೀಯ ಮತ್ತು ಸಮಗ್ರ ಪರಿಶೀಲನೆ ನಡೆಸಲಿದೆ. ಸೆ.30ರಂದು ಬೈರಮಂಗಲ, ಬನ್ನಿಗಿರಿ, ಕೆ.ಜಿ.ಗೊಲ್ಲರಪಾಳ್ಯ, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ರೈತರಿಂದ ಸಮಿತಿ ಅಹವಾಲು ಸ್ವೀಕರಿಸಲಿದೆ. ಅ.1ರಂದು ಹೊಸೂರು, ಕಂಚುಗಾರನಹಳ್ಳಿ, ಅರಳಾಳುಸಂದ್ರ, ವಡೇರಹಳ್ಳಿ ರೈತರಿಂದ ಅಹವಾಲು ಸ್ವೀಕಾರ ಮಾಡಲಿದೆ.

ಪೂರ್ವ ನೋಂದಣಿ ಕಡ್ಡಾಯ:

ಅಹವಾಲು ಸಲ್ಲಿಸಲು ಇಚ್ಛಿಸುವ ಭೂ ಮಾಲೀಕರು - ರೈತರು ಬಿಡದಿ ಹೋಬಳಿಯ ಉಪತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ, ತಮ್ಮ ಜಮೀನಿನ ಆರ್ ಟಿಸಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ತೋರಿಸಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಈ ರೀತಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಂಡ ರೈತರು - ಭೂ ಮಾಲೀಕರು ಮಾತ್ರ ನಿಗದಿತ ದಿನಾಂಕಗಳಂದು ಸಮಿತಿಯ ಮುಂದೆ ಹಾಜರಾಗಿ ತಮ್ಮ ಮನವಿಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಪರಿಶೀಲನಾ ಸಮಿತಿ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಬಾಕ್ಸ್‌..........

ಸಮಿತಿ ಗ್ರಾಮಗಳಿಗೆ ಭೇಟಿ ನೀಡಿ ಅಹವಾಲು ಆಲಿಸಲು ರೈತರ ಆಗ್ರಹ

ರಾಮನಗರ:

ಬಿಡದಿ ಟೌನ್ ಶಿಪ್ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರು, ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಪರಿಶೀಲನಾ ಸಮಿತಿಯು ಯೋಜನೆ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಅಹವಾಲು ಆಲಿಸಬೇಕೆಂದು ಒತ್ತಾಯಿಸಿದರು.

ಬೈರಗಮಂಗಲ ವೃತ್ತದಲ್ಲಿ ಬಿಡದಿ - ಹಾರೋಹಳ್ಳಿ ರಸ್ತೆ ಮಧ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರು, ಗುರುವಾರ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಪರಿಶೀಲನಾ ಸಮಿತಿ ಹೊರಡಿಸಿರುವ ಪ್ರಕಟಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಗುಹನಾಥನ್ ನರೇಂದರ್ ನೇತೃತ್ವದ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಪರಿಶೀಲನಾ ಸಮಿತಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಹವಾಲು ಸ್ವೀಕರಿಸುವುದು ಸರಿಯಲ್ಲ. ಪ್ರತಿ ಗ್ರಾಮಗಳಿಗೂ ಸಮಿತಿ ಭೇಟಿ ನೀಡಬೇಕೆಂದು ಒತ್ತಾಯಿಸಿದರು.

ಅಹವಾಲು ಸ್ವೀಕರಿಸಲು ಎರಡು ದಿನ ಕಾಲಾವಕಾಶ ಸಾಕಾಗುವುದಿಲ್ಲ. ಒಂದು ವಾರ ಕಾಲಾವಕಾಶ ನೀಡಬೇಕು. ಸರ್ಕಾರ ರೈತರು ಸೂಚಿಸಿರುವ ಸದಸ್ಯರನ್ನು ಸಮಿತಿಯಲ್ಲಿ ಸೇರಿಸದೆ ಏಕ ಪಕ್ಷಿಯವಾಗಿ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.

ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ವಸ್ತುಸ್ಥಿತಿ ಅಭಿಪ್ರಾಯ ಸಂಗ್ರಹಿಸಬೇಕು. ಇಲ್ಲದಿದ್ದರೆ ವರದಿಯನ್ನು ತಿರಸ್ಕರಿಸುತ್ತೇವೆ ಎಂದು ಸಮಿತಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವ ಉಪವಾಸ ನಿರತ ರೈತರು ಎಚ್ಚರಿಕೆ ನೀಡಿದರು.

24ಕೆಆರ್ ಎಂಎನ್ 3.ಜೆಪಿಜಿ

ಬೈರಮಂಗಲ ವೃತ್ತದಲ್ಲಿ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು.