ಸಮಿತಿ ಅಧಿಕಾರಿಗಳು ಕಾರ್ಯಯೋಜನೆ ಸಿದ್ಧಪಡಿಸಿಕೊಳ್ಳಿ: ಡೀಸಿ ಕುಮಾರ್

| Published : Aug 18 2024, 01:49 AM IST

ಸಮಿತಿ ಅಧಿಕಾರಿಗಳು ಕಾರ್ಯಯೋಜನೆ ಸಿದ್ಧಪಡಿಸಿಕೊಳ್ಳಿ: ಡೀಸಿ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಆಹಾರ ಸಮಿತಿಯವರು ಅಂದಾಜು 3 ರಿಂದ 5 ಲಕ್ಷ ಜನರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಬೇಕಿದೆ. ಅಂದಾಜು 50 ಕೌಂಟರ್ ಗಳನ್ನು ತೆರೆಯಬೇಕಿದೆ. ಮೂರು ರೀತಿಯ ಊಟದ ಮೆನ್ಯೂ ಸಿದ್ಧಪಡಿಸಿಕೊಳ್ಳಬೇಕು. ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿ 3 ದಿನಗಳ ಕಾಲ ಯಾವ ಮೆನ್ಯೂ ನೀಡಬಹುದು ಎಂದು ಅಂತಿಮವಾಗಿ ತೀರ್ಮಾನಿಸಲಾಗುವುದು .

ಕನ್ನಡಪ್ರಭ ವಾರ್ತೆ ಮಂಡ್ಯ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ, ಆಹಾರ ಹಾಗೂ ವಸತಿ ಸಮಿತಿಗಳ ಕೆಲಸ ಪ್ರಮುಖವಾಗಿದೆ. ಸಮಿತಿ ಅಧಿಕಾರಿಗಳು ಕಾರ್ಯಯೋಜನೆಯನ್ನು ಸಿದ್ಧಪಡಿಸಿ ಎಂದು ಜಿಲ್ಲಾಧಿಕಾರಿ‌ ಡಾ.ಕುಮಾರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ - 2024 ರ ಕುರಿತು ಪೂರ್ವಭಾವಿ ಸಭೆ ನಡೆಸಿದ ನಂತರ ನಗರದ ಹೊರವಲಯದ ಸ್ಯಾಂಜೋ ಆಸ್ಪತ್ರೆ ಇರುವ ಸ್ಥಳದ ಪರಿಶೀಲನೆ ನಡೆಸಿದರು. ಸಮ್ಮೇಳನದ ಮುಖ್ಯ ವೇದಿಕೆ, ಸಮಾನಾಂತರ ವೇದಿಕೆ, ಆಸನದ ವ್ಯವಸ್ಥೆ ಸೇರಿದಂತೆ ಹಲವು ನಿರ್ಮಾಣ ಕೆಲಸಗಳಿರುತ್ತವೆ. ಇದರೊಂದಿಗೆ ಟೆಂಡರ್ ಗಳನ್ನು ಸಹ ಕರೆಯಬೇಕಿದೆ. ಈಗಿನಿಂದಲೇ ಕೆಲಸ ಚುರುಕುಗೊಳಿಸಿ ಎಂದು ಸೂಚಿಸಿದರು.

ಆಹಾರ ಸಮಿತಿಯವರು ಅಂದಾಜು 3 ರಿಂದ 5 ಲಕ್ಷ ಜನರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಬೇಕಿದೆ. ಅಂದಾಜು 50 ಕೌಂಟರ್ ಗಳನ್ನು ತೆರೆಯಬೇಕಿದೆ. ಮೂರು ರೀತಿಯ ಊಟದ ಮೆನ್ಯೂ ಸಿದ್ಧಪಡಿಸಿಕೊಳ್ಳಬೇಕು. ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿ 3 ದಿನಗಳ ಕಾಲ ಯಾವ ಮೆನ್ಯೂ ನೀಡಬಹುದು ಎಂದು ಅಂತಿಮವಾಗಿ ತೀರ್ಮಾನಿಸಲಾಗುವುದು ಎಂದರು.

ವಸತಿಗಾಗಿ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಹಾಗೂ ಮೈಸೂರಿನಲ್ಲಿರುವ ಹೊಟೇಲ್, ವಸತಿ ಶಾಲೆ, ಸಮುದಾಯ ಭವನ, ಚೌಲ್ಟರಿ, ಶಾಲೆಗಳನ್ನು ಪಟ್ಟಿಕೊಂಡು ಚರ್ಚಿಸಿ, ಈಗಾಗಲೇ ಅವರಿಗೆ ಡಿಸೆಂಬರ್ ಮಾಹೆಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಾಯ್ದಿರಿಸುವಂತೆ ಪತ್ರ ಬರೆಯಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ ಮಹೇಶ್ ಜೋಷಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್, ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.