ಹಿರಿಯ ಮುಖಂಡ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಹಿಂದಿನಿಂದಲೂ ನಿರಂತರವಾಗಿ ಅನ್ಯಾಯವಾಗುತ್ತಿದೆ. ತಮಿಳುನಾಡಿನ ಪರ ಪ್ರಾಧಿಕಾರಗಳು ಕೆಲಸ ಮಾಡುತ್ತಿವೆ. ಕನಿಷ್ಠ ಕೆಆರ್ ಎಸ್ ಜಲಾನಯನ ಪ್ರದೇಶದಲ್ಲಿ ಮಳೆ ಆಧಾರಿತ ಮಾಹಿತಿ ತೆಗೆದುಕೊಳ್ಳದೆ, ಇಲ್ಲಿನ ಜಲಾಶಯದ ನೀರಿನ ಸಂಗ್ರಹ ಪರಿಶೀಲಿಸದೆ ಪ್ರತಿ ಬಾರಿಯೂ ತಮಿಳುನಾಡಿಗೆ ನೀರು ಹರಿಸಿ ಎಂದು ಆದೇಶ ನೀಡುವುದನ್ನು ಖಂಡಿಸಿದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿರುವುದನ್ನು ಖಂಡಿಸಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ (ಸಿಡಬ್ಲ್ಯುಆರ್‌ಎ) ವಿರುದ್ಧ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಪಟ್ಟಣದ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.ಕುವೆಂಪು ವೃತ್ತದಲ್ಲಿ ಹಿರಿಯ ಮುಖಂಡ ಕೆ.ಎಸ್.ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ಸೇರಿದ ಸಮಿತಿ ಸದಸ್ಯರು ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ಹಾಗೂ ನಿಯಂತ್ರಣ ಸಮಿತಿ ವಿರುದ್ಧ ಘೋಷಣೆ ಕೂಗಿದರು.
ಹಿರಿಯ ಮುಖಂಡ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಹಿಂದಿನಿಂದಲೂ ನಿರಂತರವಾಗಿ ಅನ್ಯಾಯವಾಗುತ್ತಿದೆ. ತಮಿಳುನಾಡಿನ ಪರ ಪ್ರಾಧಿಕಾರಗಳು ಕೆಲಸ ಮಾಡುತ್ತಿವೆ. ಕನಿಷ್ಠ ಕೆಆರ್ ಎಸ್ ಜಲಾನಯನ ಪ್ರದೇಶದಲ್ಲಿ ಮಳೆ ಆಧಾರಿತ ಮಾಹಿತಿ ತೆಗೆದುಕೊಳ್ಳದೆ, ಇಲ್ಲಿನ ಜಲಾಶಯದ ನೀರಿನ ಸಂಗ್ರಹ ಪರಿಶೀಲಿಸದೆ ಪ್ರತಿ ಬಾರಿಯೂ ತಮಿಳುನಾಡಿಗೆ ನೀರು ಹರಿಸಿ ಎಂದು ಆದೇಶ ನೀಡುವುದನ್ನು ಖಂಡಿಸಿದರು.ರೈತರ ಬೆಳೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆಗಳನ್ನು ಕೇಳುವ ಪರಿಜ್ಞಾನವಿಲ್ಲದ ಪ್ರಾಧಿಕಾರಗಳು ಪ್ರತಿ ಬಾರಿಯೂ ಕೆಆರ್ ಎಸ್ ಜಲಾಶಯದಿಂದ ನೀರು ಬಿಡಿ ಎನ್ನುತ್ತಿವೆ. ಇದಕ್ಕೆ ನಮ್ಮನ್ನಾಳುತ್ತಿರುವ ಸರ್ಕಾರ ಹಾಗೂ ರಾಜಕಾರಣಿಗಳೇ ನೇರ ಹೊಣೆಗಾರರು. ಕಾವೇರಿ ನೀರಿನ ವಾಸ್ತವ ವಿಚಾರವನ್ನು ಪ್ರಾಧಿಕಾರದ ಮುಂದೆ ಸಮರ್ಪಕವಾಗಿ ಮಂಡನೆ ಮಾಡಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ದೂರಿದರು.
ಸಿಎಂ ಡಿ.ಕೆ ಶಿವಕುಮಾರ್ ಅವರು ಮಂತ್ರಿ ಮಂಡಲ, ಖಾತೆ ಹಂಚಿಕೆ, ಬಿಡದಿ ಟೌನ್ ಶಿಪ್ ಎಂದು ಹೇಳಿಕೊಂಡು ಕಾಲಹರಣ ಮಾಡಿ ರೈತರ ಬಗ್ಗೆ ಗಮನ ಹರಿಸದೇ ರಾಜ್ಯದ ಜನರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ರೈತರು ಹೊಸ ಬೆಳೆ ಬೆಳೆಯಲು ಮುಂದಾಗುತ್ತಿಲ್ಲ, ಇಲ್ಲಿನ ರೈತರ ಲಕ್ಷಾಂತರ ಎಕರೆಗೆ ಜಮೀನಿನ ಬೆಳೆಗಳಿಗೆ ಸಂಪೂರ್ಣ ನೀರಿಲ್ಲದಂತೆ ಮಾಡುವ ಪ್ರಯತ್ನವಾಗಿದೆ. ಆದ್ದರಿಂದ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ನ್ಯಾಯಾಲಯದ ಮೊರೆ ಹೋಗಿ ಇಲ್ಲಿನ ಜನರ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಸಮಿತಿ ಅಧ್ಯಕ್ಷ ಕೃಷ್ಣೇಗೌಡ ಬಲ್ಲೇನಹಳ್ಳಿ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆಯ ಪ್ರಸ್ತುತ ನೀರಿನ ಬಗ್ಗೆ ವಾಸ್ತವ ಸ್ಥಿತಿ ಅರಿಯದೆ ಪ್ರಾಧಿಕಾರಗಳು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿವೆ. ಎಷ್ಟೆ ಕಷ್ಟವಾದರೂ ಸರಿಯೇ ತಮಿಳುನಾಡಿಗೆ ನೀರು ಹರಿಸಲು ನಮ್ಮ ಸರ್ಕಾರಗಳು ಮುಂದಾಗಬಾರದು. ಒಂದು ವೇಳೆ ನೀರು ಬಿಟ್ಟರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ರಾಮಕೃಷ್ಣ, ಮಹದೇವು, ಜಯರಾಮು, ಮಂಜುನಾಥ್, ಎಂ.ವಿ ಕೃಷ್ಣ, ಶ್ರೀನಿವಾಸ್, ಲೋಕೇಶ್, ರವಿಲಕ್ಷ್ಮಣ, ಶಿವಣ್ಣ, ಮಹದೇವು ಉಂಡವಾಡಿ, ಮರೀಗೌಡ ಸೇರಿದಂತೆ ಇತರ ಸಮಿತಿ ಮುಖಂಡರು ಹಾಗೂ ರೈತರು ಇದ್ದರು.