ಪಟಾಕಿ ಅಂಗಡಿಗೆ ಸಮಿತಿ ಅನುಮತಿ ಕಡ್ಡಾಯ: ಡಾ.ಕುಮಾರ

| Published : Oct 14 2023, 01:00 AM IST

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲು ತಾಲ್ಲೂಕು ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ: ಜಿಲ್ಲೆಯಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲು ತಾಲ್ಲೂಕು ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಟಾಕಿ ಅಂಗಡಿ ಅನುಮತಿ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ನ.11 ರಿಂದ 14 ರವರೆಗೆ ತಾತ್ಕಾಲಿಕ ಪಟಾಕಿ ಅಂಗಡಿ ತೆರೆಯಲು ತಾಲ್ಲೂಕು ಸಮಿತಿ ಸ್ಥಳ ನಿಗದಿಮಾಡಲಿದ್ದು, ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಅಂಗಡಿ ತೆರೆಯಲು ಅರ್ಜಿಗಳನ್ನು ಪರಿಶೀಲಿಸಿ ಅವಕಾಶ ನೀಡಲಾಗುವುದು ಎಂದರು. ಶಾಶ್ವತವಾಗಿ ಕಾರ್ಯನಿರ್ವಹಿಸುತ್ತಿರುವ ಪಟಾಕಿ ಅಂಗಡಿಗಳಿಗನ್ನು ಸಹ ಸಮಿತಿ ಪರಿಶೀಲಿಸಿ ಷರತ್ತುಗಳು ಪೂರೈಸಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಲಿದೆ. ಅನಧಿಕೃತವಾಗಿ ರಸ್ತೆ ಬದಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಾಡುವುದು ಕಂಡು ಬಂದಲ್ಲಿ ನಿಯಮಾನುಸಾರ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಷರತ್ತುಗಳನ್ನು ಪೂರೈಸಬೇಕು: ಪಟಾಕಿ ಅಂಗಡಿ ತೆರೆಯಲು ಸಮಿತಿಯಿಂದ ಅನುಮತಿ ಪಡೆಯುವವರು ಎಲ್ಲಾ ಷರತ್ತುಗಳನ್ನು ಪೂರೈಸಬೇಕು. ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಮಾರಾಟಕ್ಕೆ ಅವಕಾಶವಿರಲಿದೆ. ಪಟಾಕಿ ಮಾರಾಟದ ದರಗಳನ್ನು ಅನಾವರಣಗೊಳಿಸಬೇಕು. ಅಂಗಡಿಯಲ್ಲಿ ಅಡಿಗೆ ಮಾಡುವುದು, ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು. ಮುನ್ನೆಚ್ಚರಿಕಾ ಕ್ರಮವಾಗಿ ಅಂಗಡಿಯವರು ಸಾವಿರ ಲೀಟರ್ ನೀರು, ಸ್ಯಾಂಡ್ ಬ್ಯಾಗ್, ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಯ ನಡುವೆ ಅಂತರ, ಅಂಗಡಿಯ ಒಳಗೆ ಹಾಗೂ ಹೊರಗೆ ತೆರಳಲು ಸ್ಥಳಾವಕಾಶ ಇರಬೇಕು. ಇವುಗಳನ್ನು ಸಮಿತಿ ಅವರು ಪರಿಶೀಲಿಸಿ ವರದಿ ನೀಡಬೇಕು ಎಂದರು. ದೀಪಾವಳಿ ಹಬ್ಬದಲ್ಲಿ ಸಾರ್ವಜನಿಕರು ಹಸಿರು ಪಟಾಕಿ ಮಾತ್ರ ಖರೀದಿಸಬೇಕು. ಪಟಾಕಿ ಪ್ಯಾಕ್ ಮೇಲೆ ಸಿ.ಎಸ್.ಐ.ಆರ್ ಲೋಗೋ ಮತ್ತು ಸಂಖ್ಯೆ ಇರುವುದನ್ನು ಪರಿಶೀಲಿಸಿಕೊಳ್ಳುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್. ಹೆಚ್‌.ನಿರ್ಮಲಾ ಇತರರಿದ್ದರು.