ಮಂಗಳೂರು: ಮಂಗಳೂರು ನಗರದಲ್ಲಿ ಒಳಚರಂಡಿ ಅವ್ಯವಸ್ಥೆ ಕುರಿತಂತೆ ಸಾರ್ವಜನಿಕ ಉದ್ಯಮಗಳ ಸಮಿತಿ ಸಮಗ್ರ ಒಳಚರಂಡಿ ಯೋಜನೆಗೆ ಪೂರಕ ಕಾಲಮಿತಿ ಯೋಜನೆ ಸಿದ್ಧಪಡಿಸಿ, ಅದರಂತೆ ಅನುಷ್ಠಾನಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹೇಳಿದರು.ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಮಂಡಲಗಳ 20 ಮಂದಿ ಶಾಸಕರನ್ನು ಒಳಗೊಂಡ ಈ ಸಮಿತಿ ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಧಾರದಲ್ಲಿ ನೀಡಿರುವ ವರದಿಯಲ್ಲಿ ಈ ಶಿಫಾರಸು ಮಾಡಿದೆ ಎಂದರು.

ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಸಮಾಲೋಚಕರನ್ನು ನೇಮಕ ಮಾಡಲು ನಗರಾಭಿವೃದ್ಧಿ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ ಎಂದರು. ಪ್ರಸಕ್ತ ಜಲ ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ನೀರನ್ನು ರಾಜಕಾಲುವೆಗಳ ಮೂಲಕ ನದಿಗಳಿಗೆ ಹರಿಸಲಾಗುತ್ತಿದೆ. ಇದರಿಂದ ಜಲಮೂಲಗಳು ಕಲುಷಿತವಾಗುತ್ತಿದೆ. ಈ ವಿಸ್ತೃತ ಯೋಜನೆ ತಯಾರಿಸುವಾಗ ಸಂಸ್ಕರಿಸಿದ ನೀರನ್ನು ಮರುಬಳಕೆಗೆ ಬೇಕಾಗಿರುವ ಅಗತ್ಯ ಕಾಮಗಾರಿಗಳನ್ನು ಸೇರಿಸಬೇಕು. ಈಗಾಗಲೇ ಕೈಗೊಂಡ ಕಾಮಗಾರಿಗಳಲ್ಲಿ ಹಲವಾರು ನ್ಯೂನ್ಯತೆಗಳಿದ್ದು ಸಿಎಜಿಯವರು ಲೆಕ್ಕ ಪರಿಶೋಧನೆಯಲ್ಲಿ ಗಮನಿಸಿ ವರದಿ ಮಾಡಿದ್ದು, ಹೊಸ ಸಮಗ್ರ ಯೋಜನೆಯಲ್ಲಿ ಲೋಪದೋಷಗಳು ಮರುಕಳಿಸದಂತೆ ಎಚ್ಚರ ವಹಿಸಿ ದುಂದು ವೆಚ್ಚ ತಡೆಯಬೇಕು. ಪ್ರಸ್ತಾವಿತ ಸಮಗ್ರ ಯೋಜನೆಗೆ ಸುಮಾರು 1,250 ಕೋಟಿ ರು. ಅಗತ್ಯವಿರುವುದಾಗಿ ಪಾಲಿಕೆ ತಿಳಿಸಿದೆ. ಯೋಜನೆಗೆ ಡಿಪಿಆರ್‌ ತಯಾರಿಸಿ ಅಗತ್ಯ ಆಡಳಿತಾತ್ಮಕ ಅನುಮೋದನೆಗಳು, ಅನುದಾನ ಹಂಚಿಕೆ ಹಾಗೂ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಕ್ರಮ ವಹಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿಸಿದರು.

ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ, ಪ್ರಕಾಶ್‌ ಸಾಲಿಯಾನ್‌, ಭಾಸ್ಕರ ರಾವ್‌, ಮೀನಾ ಟೆಲ್ಲಿಸ್‌, ನಾಗೇಂದ್ರ ಕುಮಾರ್‌, ರೆಹಮಾನ್‌, ನವೀನ್‌ ಡಿಸೋಜಾ ಮತ್ತಿತರರು ಇದ್ದರು.

ಎಸ್‌ಐಆರ್‌ ಪ್ರಕ್ರಿಯೆಗೆ ವೇಗ ನೀಡಿ: ದ.ಕ. ಜಿಲ್ಲೆಯಾದ್ಯಂತ ಎಸ್‌ಐಆರ್‌ (ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ) ಪ್ರಕ್ರಿಯೆ ಆಮೆಗತಿಯಲ್ಲಿ ಸಾಗಿದ್ದು, ಅದಕ್ಕೆ ವೇಗ ತುಂಬಬೇಕಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಬಿಎಲ್‌ಒಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಯೊಬ್ಬ ಮತದಾರರ ಮನೆಗೆ ತಲುಪಲು ಸಾಧ್ಯವಾಗದು. ಜತೆಗೆ ಕೆಲವೊಂದು ಬಿಎಲ್‌ಒಗಳಿಗೆ ಫಾರಂ ಭರ್ತಿ ಮಾಡುವ ಜ್ಞಾನವೂ ಇಲ್ಲವಾಗಿದೆ. ಅದಕ್ಕಾಗಿ ಅವರ ಜೊತೆ ತಜ್ಞರನ್ನು ಕಳುಹಿಸುವ ಮೂಲಕ ಎಸ್‌ಐಆರ್‌ ಪ್ರಕ್ರಿಯೆ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುವಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಐವನ್‌ ಡಿಸೋಜಾ ಆಗ್ರಹಿಸಿದರು.