ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶಿಷ್ಟವಾದ ಪ್ರತಿಭೆ ಮತ್ತು ಸಾಮರ್ಥ್ಯ ಅಡಗಿದ್ದು, ಅದನ್ನು ಗುರುತಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ನಿರಂತರ ಪರಿಶ್ರಮ, ಶಿಸ್ತು ಹಾಗೂ ಕಲಿಕೆಯ ಮೇಲಿನ ಆಸಕ್ತಿಯಿಂದ ಯಾವುದೇ ವಿದ್ಯಾರ್ಥಿಯೂ ಯಶಸ್ಸಿನ ಶಿಖರವನ್ನು ತಲುಪಬಹುದು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು.ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ೨೦೨೬-೨೭ನೇ ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಗುರಿಯತ್ತ ದೃಢ ಸಂಕಲ್ಪದಿಂದ ಸಾಗಬೇಕು. ಅಧ್ಯಯನದ ವೇಳೆ ಧನಾತ್ಮಕ ಮನೋಭಾವವನ್ನು ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಪ್ರತಿಯೊಂದು ಸವಾಲನ್ನೂ ಎದುರಿಸಬೇಕು. ಪ್ರತಿನಿತ್ಯ ಯೋಗ ಮತ್ತು ಧ್ಯಾನವನ್ನು ಜೀವನದ ಭಾಗವಾಗಿಸಿಕೊಂಡರೆ ಏಕಾಗ್ರತೆ, ಮಾನಸಿಕ ಸ್ಥೈರ್ಯ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರೊಂದಿಗೆ ದೇಶ ಪ್ರೇಮ, ಸಾಮಾಜಿಕ ಜವಾಬ್ದಾರಿ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಮಕ್ಕಳು ಕೇವಲ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದಷ್ಟೇ ಗುರಿಯನ್ನಾಗಿಸಿಕೊಳ್ಳದೆ, ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದೊಂದಿಗೆ ಸಂಸ್ಕಾರ, ಶಿಸ್ತು, ದೇಶ ಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಮಾತನಾಡಿ, ಉಪನ್ಯಾಸಕರು ಸದಾ ಮಾರ್ಗದರ್ಶನ ನೀಡಲು ಸಿದ್ಧರಿರುತ್ತಾರೆ. ಪಾಠದ ವೇಳೆ ಅಥವಾ ಸ್ವಯಂ ಅಧ್ಯಯನದ ಸಂದರ್ಭದಲ್ಲಿ ಯಾವುದೇ ಸಂದೇಹಗಳು ಎದುರಾದರೆ ಅವುಗಳನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳದೆ ಕೂಡಲೇ ಉಪನ್ಯಾಸಕರನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು. ಸಂದೇಹಗಳನ್ನು ನಿವಾರಿಸಿಕೊಳ್ಳುವುದು ಉತ್ತಮ ಶೈಕ್ಷಣಿಕ ಸಾಧನೆಗೆ ಅತ್ಯಂತ ಅವಶ್ಯಕ ಎಂದರು.ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪಿಟಿಎ ಅಧ್ಯಕ್ಷ, ನರಿಮೊಗರು ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷ ಅವಿನಾಶ್ ಕೊಡಂಕರಿ ಮಾತನಾಡಿ, ಪೋಷಕರು ಮತ್ತು ಶಿಕ್ಷಕರ ನಡುವಿನ ನಿರಂತರ ಸಂವಹನವು ವಿದ್ಯಾರ್ಥಿಗಳ ಪ್ರಗತಿಗೆ ಅತ್ಯಂತ ಅಗತ್ಯ. ಹಿಂದೆ ಶಿಸ್ತು, ಸಂಸ್ಕಾರ, ನೈತಿಕತೆ ಹಾಗೂ ಜೀವನ ಮೌಲ್ಯಗಳನ್ನು ಮಕ್ಕಳಿಗೆ ಮುಖ್ಯವಾಗಿ ಮನೆಯಲ್ಲೇ ಕಲಿಸಲಾಗುತ್ತಿತ್ತು. ಆದರೆ ಇಂದಿನ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಈ ಜವಾಬ್ದಾರಿಯ ಒಂದು ದೊಡ್ಡ ಭಾಗ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಹೇಳಿದರು
ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪಿಟಿಎ ಅಧ್ಯಕ್ಷ, ಉದ್ಯಮಿ ತಿಲಕ್ ಬಿ.ಸಿ. ಮಾತನಾಡಿ, ಮಕ್ಕಳ ಶೈಕ್ಷಣಿಕ ಸಾಧನೆಯ ಹಿಂದೆ ಪೋಷಕರ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸುತ್ತದೆ. ಪೋಷಕರು ಮಕ್ಕಳ ಅಂಕಗಳಿಗೆ ಮಾತ್ರ ಸೀಮಿತವಾಗದೆ ಅವರ ನಡವಳಿಕೆ, ಶಿಸ್ತು, ಅಧ್ಯಯನದ ಅಭ್ಯಾಸ ಹಾಗೂ ಮಾನಸಿಕ ಬೆಳವಣಿಗೆ ಮೇಲೂ ಸಮಾನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪ ಪ್ರಾಂಶುಪಾಲ ಪ್ರದೀಪ್ ಕೆ. ವೈ. ಹಾಗೂ ಉಭಯ ಶಿಕ್ಷಣ ಸಂಸ್ಥೆಗಳ ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೌಜನ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ.ಎಸ್. ಅವರು ಪ್ರಸ್ತಾವಿಸಿ ಸ್ವಾಗತಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ಚೈತ್ರಾ ವಿ. ವಂದಿಸಿದರು. ರಸಾಯನಶಾಸ್ತ್ರ ಉಪನ್ಯಾಸಕಿ ಅಪರ್ಣಾ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.