ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಶಮನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಸಮಸ್ಯೆಗಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚಿಸಿದೆ. ರೈತರು ಸಹಕರಿಸಿದರೆ 4-5 ದಿನಗಳಲ್ಲಿ ಸಮಿತಿ ರಾಜ್ಯಕ್ಕೆ ಭೇಟಿ ನೀಡಲಿದೆ.
ಹುಬ್ಬಳ್ಳಿ:
ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಶಮನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಸಮಸ್ಯೆಗಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚಿಸಿದೆ. ರೈತರು ಸಹಕರಿಸಿದರೆ 4-5 ದಿನಗಳಲ್ಲಿ ಸಮಿತಿ ರಾಜ್ಯಕ್ಕೆ ಭೇಟಿ ನೀಡಲಿದೆ. ಹಬ್ಬದ ಸಮಯದಲ್ಲಿ ಪ್ರತಿಭಟನೆ ಕೈಬಿಟ್ಟು ಮನೆಗೆ ಮರಳುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ. 29ರಂದು ನಡೆದ ಪ್ರತಿಭಟನೆ ವೇಳೆ ನೀಡಿದ್ದ ಭರವಸೆಯಂತೆ ಅ. 12ರಂದು ದೆಹಲಿಯಲ್ಲಿ ಸಭೆ ನಡೆಸಲಾಗಿತ್ತು. ರೈತ ಮುಖಂಡರು ಸಮಿತಿ ರಚನೆಗೆ ಒಪ್ಪಿದ್ದರು. ಆದರೆ, ರಾಜ್ಯಕ್ಕೆ ಮರಳಿದ ಬಳಿಕ ತೀರ್ಮಾನ ತಿರಸ್ಕರಿಸಿರುವುದು ಸರಿಯಲ್ಲ ಎಂದರು.
ಸಭೆಯ ಎರಡೇ ದಿನದಲ್ಲೇ ಸಮಿತಿ ರಚಿಸಲಾಗಿದ್ದು, ಶೀಘ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ. ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ ಪಾರದರ್ಶಕತೆ ತರಲು ಅಗತ್ಯ ಕ್ರಮಗಳ ಬಗ್ಗೆ ಸಮಿತಿ ಶಿಫಾರಸು ಮಾಡಲಿದೆ ಎಂದು ತಿಳಿಸಿದರು.ಎಥೆನಾಲ್ ಖರೀದಿ ಹೆಚ್ಚಳಕ್ಕೆ ಚರ್ಚೆ:
ದೇಶದಲ್ಲಿ ಸುಮಾರು 1,200 ಕೋಟಿ ಲೀಟರ್ ಎಥೆನಾಲ್ ಖರೀದಿಸಲಾಗುತ್ತಿದ್ದು, ಕರ್ನಾಟಕದಿಂದ 165 ಕೋಟಿ ಲೀಟರ್ ಖರೀದಿಸಲಾಗುತ್ತಿದೆ. ಕಬ್ಬಿನಿಂದ ಉತ್ಪಾದಿಸುವ ಎಥೆನಾಲ್ ಖರೀದಿ ಹೆಚ್ಚಳ ಕುರಿತು ಪೆಟ್ರೋಲಿಯಂ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.ಕಬ್ಬು ಬೆಳೆಗಾರರಿಗೆ ರಾಜ್ಯ ಸಲಹಾ ಬೆಲೆ (ಎಸ್ಎಪಿ) ಘೋಷಿಸುವಂತೆ ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಲಾಗಿದೆ. ಸಕ್ಕರೆ ಕಾರ್ಖಾನೆಗಳಿಗೆ ನಷ್ಟವಾಗದಂತೆ ಹಾಗೂ ಗ್ರಾಹಕರಿಗೂ ಬೆಲೆ ಏರಿಕೆಯ ಹೊರೆ ಬೀಳದಂತೆ ಕ್ರಮಕೈಗೊಳ್ಳಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಸಮಸ್ಯೆ ಬಗೆಹರಿಸಬಹುದು. ರೈತರ ಆಕ್ರೋಶದ ಮಾತುಗಳಿಗೆ ಬೇಸರವಿಲ್ಲ. ರೈತ ಮುಖಂಡರು ಮತ್ತೆ ಬಂದರೂ ಚರ್ಚಿಸಲು ಸಿದ್ಧ ಎಂದು ಜೋಶಿ ಹೇಳಿದರು.
