ಸಾರಾಂಶ
ರೋಣ: ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಶೇ. 15ರಷ್ಡು ಹೆಚ್ಚಳ ಮಾಡಿದ್ದರಿಂದ ಜನಸಾಮಾನ್ಯರಿಗೆ ತೀವ್ರ ಹೊರೆಯಾಗಲಿದ್ದು, ರಾಜ್ಯ ಸರ್ಕಾರದ ಈ ಕ್ರಮ ತೀವ್ರ ಖಂಡನೀಯ ಎಂದು ರೋಣ ತಾಲೂಕು ಎಬಿವಿಪಿ ಘಟಕದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಎಬಿವಿಪಿ ಶಹರ ಘಟಕ ಕಾರ್ಯದರ್ಶಿ ಸಚಿನ್ ಕುಂದರಗಿ ಮಾತನಾಡಿ, ರಾಜ್ಯ ಸರ್ಕಾರ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದ್ದು ಖಂಡನೀಯ. ಬಡವರು, ರೈತರು, ಮಧ್ಯಮ ವರ್ಗದ ಜನರು ಸಾರಿಗೆ ಬಸ್ ಪ್ರಯಾಣವನ್ನೇ ಅವಲಂಬಿಸಿದ್ದಾರೆ. ಬರಗಾಲ, ಅತಿವೃಷ್ಟಿ, ಅಗತ್ಯ ಬೆಲೆ ಏರಿಕೆಯಿಂದ ಮೊದಲೇ ಕಂಗಾಲಾದ ಜನರಿಗೆ ಮತ್ತಷ್ಟು ಪೆಟ್ಟು ನೀಡಿದಂತಾಗಿದೆ. ಒಂದೆಡೆ ಗ್ಯಾರಂಟಿ ಯೋಜನೆಗಳನ್ನು ಉಚಿತವಾಗಿ ನೀಡಿ, ಮತ್ತೊಂದು ಮಾರ್ಗದಿಂದ ಜನರಿಗೆ ಸಂಕಷ್ಟ ತಂದೊಡ್ಡುವುದು ಎಷ್ಟರ ಮಟ್ಟಿಗೆ ಸರಿ? ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದು ಸೂಕ್ತವಲ್ಲ. ಕೂಡಲೇ ದರ ಹೆಚ್ಚಳದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು. ಜನರಿಗೆ ಮೂಲಸೌಲಭ್ಯ ಸಮರ್ಪಕವಾಗಿ ಒದಗಿಸಬೇಕು ಎಂದು ಆಗ್ರಹಿಸಿದರು.ಎಬಿವಿಪಿ ತಾಲೂಕು ಸಂಚಾಲಕ ವೀರೇಶ ಉಳ್ಳಾಗಡ್ಡಿ ಮಾತನಾಡಿ, ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದ ಸಮಂಜಸವಲ್ಲ. ಇದರಿಂದ ನಿತ್ಯ ಬೇರೆಡೆ ದುಡಿಯಲು ತೆರಳುವ ಶ್ರಮಿಕರಿಗೆ ತೊಂದರೆಯಾಗಲಿದೆ. ಸರ್ಕಾರಿ ಬಸ್ ಪ್ರಯಾಣವನ್ನೇ ಅವಲಂಬಿಸಿರುವ ಜನರ ಮೇಲೆ ಆರ್ಥಿಕ ಹೊರೆಯನ್ನುಂಟು ಮಾಡಿದಂತಾಗಿದೆ ಎಂದು ಹೇಳಿದರು.
ಪಟ್ಟಣದ ಮುಲ್ಲನಬಾವಿ ವೃತ್ತ, ಪೋತದಾರ ರಾಜನ ಕಟ್ಟೆ ಬಳಿ ಮಾನವ ಸರಪಳಿ ನಿರ್ಮಿಸಿ, ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಉಪ ತಹಸೀಲ್ದಾರ್ ಜೆ.ಟಿ. ಕೊಪ್ಪದ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ತಾಲೂಕು ಎಸ್.ಎಫ್.ಡಿ. ಪ್ರಮುಖ ವಿಶ್ವ ಕುರಿ, ನಗರ ಸಹ ಕಾರ್ಯದರ್ಶಿ ಶಿವಕುಮಾರ ಬಣಪ್ಪನವರ, ತಾಲೂಕು ಕಾರ್ಯಕರ್ತ ಹರ್ಷ ಕಟ್ಟಿ, ಶರಣಪ್ಪ ಮುದಿಗೌಡರ ಹಾಗೂ ಪಟ್ಟಣದ ವಿವಿಧ ಕಾಲೇಜು ವಿದ್ಯಾರ್ಥಿಗಳು, ಎಬಿವಿಪಿ ಪದಾಧಿಕಾರಿಗಳು ಭಾಗವಹಿಸಿದ್ದರು.
ಬಸ್ ಪ್ರಯಾಣ ದರ ಏರಿಕೆ ಕೈಬಿಡಲು ಮನವಿ:ಬಸ್ ಪ್ರಯಾಣ ದರ ಏರಿಕೆ ಕೈಬಿಡಬೇಕು, ವಿದ್ಯಾರ್ಥಿಗಳಿಗೆ ಹೆಚ್ಚು ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಮುಂಡರಗಿ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಮೂಲಕ ಬಡ ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನತೆಗೆ ಹೊರೆ ಹೇರಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿ ನಿತ್ಯ ಸಾವಿರಾರು ಜನ ತಮ್ಮ ಕೆಲಸ-ಕಾರ್ಯಗಳಿಗೆ ಓಡಾಡುತ್ತಿದ್ದಾರೆ. ಆದರೆ ಶೇ. 15ರಷ್ಟು ಬಸ್ ಪ್ರಯಾಣದರ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಅದರ ಆರ್ಥಿಕ ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.ತೇಜು ಹೊರಟೂರು, ಮಾಂತಯ್ಯ ಹಿರೇಮಠ, ಸಂಜು ದೇವರಮನೆ, ಸಚಿನ್ ಕುಮಾರ್ ದೇಸಾಯಿ ಉಪಸ್ಥಿತರಿದ್ದರು. ತಹಸೀಲ್ದಾರ್ ಎರ‍್ರಿಸ್ವಾಮಿ ಪಿ.ಎಸ್. ಮನವಿ ಸ್ವೀಕರಿಸಿದರು.