ಸಾರಾಂಶ
ಇಂದಿಗೂ ಸಹ ಶಾಸಕರಾಗಿ ಆಯ್ಕೆಯಾದವರು ರಾಜ್ಯಪಾಲರನ್ನು ಭೇಟಿ ಮಾಡಲು ಕೆಲವೊಂದು ಕಟ್ಟುಪಾಡುಗಳು ಇವೆ. ಹೀಗಾಗಿ ರಾಜ್ಯಪಾಲರು ಸಾಮಾನ್ಯ ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಸಾಮಾನ್ಯ ವ್ಯಕ್ತಿಯಾದ ನನ್ನನ್ನು ರಾಜ್ಯಪಾಲರಾಗಿ ನೇಮಿಸಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ರಾಜ್ಯಪಾಲರು ಸಾಮಾನ್ಯ ವರ್ಗದ ಜನರೊಂದಿಗೆ ಬೆರೆತು ಅವರ ದುಃಖ ದುಮ್ಮಾನ ಗಳಿಗೆ ಸ್ಪಂದಿಸಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಓರ್ವ ಸಾಮಾನ್ಯ ವ್ಯಕ್ತಿಯನ್ನು ರಾಜ್ಯಪಾಲರಾಗಿ ನೇಮಕ ಮಾಡಿದೆ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಮಂಗಳವಾರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಿರಿಯ ವಕೀಲ ಕೆ.ಎಸ್.ರಘು ನೀಡಿದ ಸಂವಿಧಾನದ ಕೈಬರಹದ ಮೂಲ ಪ್ರತಿಯನ್ನು ವೀಕ್ಷಣೆ ಮಾಡಿದ ನಂತರ ಗೌರವ ಸ್ವೀಕರಿಸಿ ಮಾತನಾಡಿ, ಇಂದಿಗೂ ಸಹ ಶಾಸಕರಾಗಿ ಆಯ್ಕೆಯಾದವರು ರಾಜ್ಯಪಾಲರನ್ನು ಭೇಟಿ ಮಾಡಲು ಕೆಲವೊಂದು ಕಟ್ಟುಪಾಡುಗಳು ಇವೆ. ಹೀಗಾಗಿ ರಾಜ್ಯಪಾಲರು ಸಾಮಾನ್ಯ ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಸಾಮಾನ್ಯ ವ್ಯಕ್ತಿಯಾದ ನನ್ನನ್ನು ರಾಜ್ಯಪಾಲರಾಗಿ ನೇಮಿಸಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಪ್ರಸ್ತುತ ಮೇಘಾಲಯದಲ್ಲಿ ಮಳೆಗಾಲ ಇರುವ ಕಾರಣ ಪ್ರವಾಸ ಮಾಡಲು ಅನುಕೂಲಕರವಾಗಿಲ್ಲ. ಹೀಗಾಗಿ ಜನವರಿ ತಿಂಗಳಲ್ಲಿ ಮೇಘಾಲಯಕ್ಕೆ ಆಗಮಿಸಿದರೆ ರಾಜಭವನದಿಂದ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಕೀಲ ವೃಂದಕ್ಕೆ ಆಹ್ವಾನ ನೀಡಿದರು.ಈ ವೇಳೆ ಮದ್ದೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ.ಎನ್.ಸತ್ಯ, ಮಾಜಿ ಕಾರ್ಯದರ್ಶಿ ಪಿ.ಮಲ್ಲೇಶ್, ವಕೀಲರಾದ ಸುನಿಲ್ ಕುಮಾರ್, ಡಿ.ಆರ್.ಸುರೇಶ್, ಬಿಜೆಪಿ ಮುಖಂಡ ಮಧುಕುಮಾರ್, ಮಲ್ಲಿಕಾರ್ಜುನ್, ಕೆಂಪ ಬೋರಯ್ಯ ಇದ್ದರು.