ಈದ್ ಮಿಲಾದ್ ಮೆರವಣಿಗೆ ವೇಳೆ ಪರಸ್ಪರ ನಿಂದಿಸಿದರು ಎಂದು ಆರೋಪಿಸಿ ಎರಡು ಕೋಮಿನ ಗುಂಪುಗಳ ಮಧ್ಯೆ ಸಂಘರ್ಷವಾಗಿ ಕೆಲ ಹೊತ್ತು ಆತಂಕದ ವಾತಾವರಣ ನೆಲೆಸಿದ ಘಟನೆ ಬಸವನಗುಡಿ ಸಮೀಪ ಬುಧವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಈದ್ ಮಿಲಾದ್ ಮೆರವಣಿಗೆ ವೇಳೆ ಪರಸ್ಪರ ನಿಂದಿಸಿದರು ಎಂದು ಆರೋಪಿಸಿ ಎರಡು ಕೋಮಿನ ಗುಂಪುಗಳ ಮಧ್ಯೆ ಸಂಘರ್ಷವಾಗಿ ಕೆಲ ಹೊತ್ತು ಆತಂಕದ ವಾತಾವರಣ ನೆಲೆಸಿದ ಘಟನೆ ಬಸವನಗುಡಿ ಸಮೀಪ ಬುಧವಾರ ನಡೆದಿದೆ. ಯಾರಬ್ ನಗರದಿಂದ ನೃಪತುಂಗ ರಸ್ತೆಯಲ್ಲಿ ವೈಎಂಸಿ ಮೈದಾನಕ್ಕೆ ಈದ್ ಮಿಲಾದ್ ಮೆರವಣಿಗೆ ಸಾಗುವಾಗ ಮಾರ್ಗ ಮಧ್ಯೆ ಕೆ.ಆರ್.ರಸ್ತೆಯ ಟಾಟಾ ಸಿಲ್ಕ್ ಗರಡಿ ಅಪಾರ್ಟ್‌ಮೆಂಟ್ ಮುಂದೆ ಈ ಗಲಾಟೆ ನಡೆದಿದೆ. ಈ ವೇಳೆ ಹಿಂದೂ ಪರ ಸಂಘಟನೆ ಕಾರ್ಯಕರ್ತ ಮುರಳಿ ತಲೆಗೆ ಪೆಟ್ಟಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಈ ಘರ್ಷಣೆ ಸಂಬಂಧ ಮುಸ್ಲಿಂ ಹಾಗೂ ಹಿಂದೂ ಪರ ಸಂಘಟನೆಯ ಕೆಲವರನ್ನು ಬಸವನಗುಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಘಟನೆ ಕಾರಣವೇನು?
ಕೆ.ಆರ್.ರಸ್ತೆಯಲ್ಲಿ ಹಿಂದೂ ರಕ್ಷಣಾ ಪಡೆಯ ಮುಖ್ಯಸ್ಥ ಪುನೀತ್ ಕೆರೆಹಳ್ಳಿಯ ಕಚೇರಿ ಇದೆ. ಆ ಕಚೇರಿ ಮುಂದೆ ಮಧ್ಯಾಹ್ನ 3.45ರ ಸುಮಾರಿಗೆ ಈದ್ ಮಿಲಾದ್ ಮೆರವಣಿಗೆ ಹಾದು ಹೋಗುವಾಗ ಘರ್ಷಣೆಯಾಗಿದೆ. ಪರಸ್ಪರ ನಿಂದಿಸಿ ಘೋಷಣೆ ಕೂಗಿಕೊಂಡು ಮೆರವಣಿಗೆಯಲ್ಲಿದ್ದ ಕೆಲ ಮುಸ್ಲಿಂ ಯುವಕರು ಹಾಗೂ ಹಿಂದೂ ಪಡೆ ಕಾರ್ಯಕರ್ತರು ಕೈ-ಕೈ ಮಿಲಾಯಿಸಿದ್ದಾರೆ. ಈ ವೇಳೆ ಮುರಳಿ ತಲೆಗೆ ದೊಣ್ಣೆಯಿಂದ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೂಡಲೇ ಗಲಾಟೆಗೆ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚುದುರಿಸಿದ್ದಾರೆ.ತಕ್ಷಣವೇ ಗಾಯಾಳುವನ್ನು ಸಮೀಪದ ವಿಕ್ಟೋರಿಯಾ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ.ಠಾಣೆಗೆ ಪರಸ್ಪರ ದೂರು
ಶಾಂತಯುವಾಗಿ ಮೆರವಣಿಗೆ ಸಾಗುವಾಗ ತಮ್ಮ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದರು ಎಂದು ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರ ವಿರುದ್ಧ ಮುಸ್ಲಿಂ ಯುವಕರು ಆರೋಪಿಸಿದ್ದಾರೆ. ಆದರೆ ತಮ್ಮನ್ನು ಗುರಿಯಾಗಿಸಿ ಮೆರವಣಿಗೆ ವೇಳೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ನಡೆಸಿದರು ಎಂದು ಮುಸ್ಲಿಂ ಯುವಕರ ವಿರುದ್ಧ ಹಿಂದೂ ರಕ್ಷಣಾ ಪಡೆ ಕಾರ್ಯಕರ್ತರು ದೂರಿದ್ದಾರೆ. ಈ ಸಂಬಂಧ ಬಸನಗುಡಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ಸಿಸಿಟಿವಿ ಪರಿಶೀಲಿಸಿ ಕ್ರಮ: ಡಿಸಿಪಿಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆಗೆ ಮೂಲ ಕಾರಣಕರ್ತರು ಯಾರೆಂಬುದು ಖಚಿತವಾಗಿಲ್ಲ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ದಕ್ಷಿಣ ವಿಭಾಗದ ಡಿಸಿಸಿ ವಂಶಿಕೃಷ್ಣ ತಿಳಿಸಿದರು.ಈ ಗಲಾಟೆ ಸಂಬಂಧ ಎರಡು ಕಡೆಯವರು ದೂರು ನೀಡಿದ್ದಾರೆ. ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಗಲಾಟೆ ವಿಚಾರ ತಿಳಿದ ತಕ್ಷಣವೇ ಕ್ರಮ ಜರುಗಿಸಲಾಗಿದೆ. ಹೀಗಾಗಿ ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿ ತಹಬದಿಗೆ ಬಂದಿದೆ. ಮೆರವಣಿಗೆ ಸಾಗುವ ದಾರಿಯಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು ಎಂದು ಡಿಸಿಪಿ ಹೇಳಿದರು.