ಕೋಮುಗಲಭೆ: ಬಂಧನ ಭೀತಿಯಿಂದ ಊರು ತೊರೆದಿದ್ದ ಯುವಕನಿಗೆ ಪಾರ್ಶ್ವವಾಯು

| Published : Sep 22 2024, 01:55 AM IST / Updated: Sep 22 2024, 01:56 AM IST

ಕೋಮುಗಲಭೆ: ಬಂಧನ ಭೀತಿಯಿಂದ ಊರು ತೊರೆದಿದ್ದ ಯುವಕನಿಗೆ ಪಾರ್ಶ್ವವಾಯು
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ: ಗಣೇಶ ಮೆರವಣಿಗೆ ವೇಳೆ ಪಟ್ಟಣದಲ್ಲಿ ಉಂಟಾದ ಕೊಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.

ನಾಗಮಂಗಲ: ಗಣೇಶ ಮೆರವಣಿಗೆ ವೇಳೆ ಪಟ್ಟಣದಲ್ಲಿ ಉಂಟಾದ ಕೊಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.

ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿರುವ ಪಟ್ಟಣದ ಬದರಿಕೊಪ್ಪಲಿನ ಎ17 ಆರೋಪಿ ಕುಮಾರ್ ಪುತ್ರ ಕಿರಣ್(29) ಬಂಧನದ ಭೀತಿ, ಗಾಬರಿ, ಕುಟುಂಬಕ್ಕಾಗಿರುವ ಪರಿಸ್ಥಿತಿಯಿಂದ ಕೊರಗಿ ಪಾರ್ಶ್ವವಾಯುವಿಗೊಳಗಾಗಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವ ನತದೃಷ್ಟ ಯುವಕ.

ಪಟ್ಟಣದಲ್ಲಿ ಸೆ.11ರ ರಾತ್ರಿ ನಡೆದ ಕೋಮು ಗಲಭೆ ಬಳಿಕ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದ ಕಿರಣ್ ಬೆಂಗಳೂರಿನಲ್ಲಿ ನೆಲೆಸಿದ್ದರು. ತಂದೆ ಜೈಲಿನಲ್ಲಿರುವುದರಿಂದ ಮನೆಯಲ್ಲಿ ತಾಯಿ, ಪತ್ನಿ ಮತ್ತು ಚಿಕ್ಕ ಮಗುವನ್ನು ಯಾರು ನೋಡಿಕೊಳ್ಳುತ್ತಾರೆಂದು ಕೊರಗುತ್ತಿದ್ದರು.

ಒಂದೆಡೆ ಬಂಧನದ ಭೀತಿಯ ಗಾಬರಿ, ಮತ್ತೊಂದೆಡೆ ಕುಟುಂಬಕ್ಕಾಗಿರುವ ಪರಿಸ್ಥಿತಿಯ ಕೊರಗಿನಲ್ಲಿದ್ದ ಕಿರಣ್‌ಗೆ ಕಳೆದ ಎರಡು ದಿನಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಯನ್ನೂ ಕೂಡ ಮಾಡಿಸಲಾಗಿತ್ತು ಎನ್ನಲಾಗಿದೆ. ಆದರೆ, ಲೋ ಬಿಪಿಯಾಗಿ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತ ಕಿರಣ್‌ಗೆ ಗಲಭೆ ಪ್ರಕರಣದಲ್ಲಿ ಜೈಲು ಸೇರಿರುವ ತಂದೆ ಕುಮಾರ್, ತಾಯಿ ಶಶಿ, ಪತ್ನಿ ಸೌಮ್ಯ ಹಾಗೂ ಎರಡು ವರ್ಷದ ಗಂಡುಮಗು ಇದ್ದು, ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ ಕಿರಣ್ ಸಾವಿನಿಂದ ದಿಕ್ಕು ತೋಚದಂತಾಗಿರುವ ಕುಟುಂಬಸ್ಥರ ರೋಧನ ಮನಕಲಕುವಂತಿತ್ತು.

ಶನಿವಾರ ಮಧ್ಯಾಹ್ನ ಕಿರಣ್ ಮೃತದೇಹವನ್ನು ಬದರಿಕೊಪ್ಪಲಿಗೆ ತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಮಾಡದ ತಪ್ಪಿಗೆ ಮನೆ ಯಜಮಾನ ಜೈಲು ಸೇರಿದ್ದರೆ, ಬಂಧನದ ಭೀತಿಯಿಂದ ಊರು ತೊರೆದು ಚಿಂತೆಗೀಡಾಗಿದ್ದ ಮಗ ಸಾವನ್ನಪ್ಪಿದ್ದಾನೆ. ನಮಗೆ ಯಾರು ದಿಕ್ಕು. ನಮಗಾಗಿರುವ ದುಸ್ಥಿತಿ ಮತ್ಯಾವ ಕುಟುಂಬಕ್ಕೂ ಬಾರದಿರಲಿ ಎಂದು ಕಿರಣ್ ತಾಯಿ ರೋಧಿಸುತ್ತಿದ್ದರು.

ಗ್ರಾಮದಲ್ಲಿ ಸ್ಮಶಾನ ಮೌನ: ಗಲಭೆ ಪ್ರಕರಣದಿಂದಾಗಿ ಗ್ರಾಮದ ಹಲವರು ಜೈಲು ಸೇರಿದ್ದರೆ, ಬಂಧನದ ಭೀತಿಯಿಂದಾಗಿ ಬಹುತೇಕ ಯುವಕರು ಊರು ತೊರೆದಿದ್ದಾರೆ. ಇದರ ನಡುವೆ ಕಿರಣ್ ಸಾವಿನಿಂದಾಗಿ ಬದರಿಕೊಪ್ಪಲಿನಲ್ಲಿ ಸ್ಮಶಾನ ಮೌನ ಆವರಿಸಿತ್ತು. ಪಟ್ಟಣ ಸೇರಿದಂತೆ ಹಲವು ಭಾಗಗಳಿಂದ ಸಹಸ್ರಾರು ಮಂದಿ ಆಗಮಿಸಿ ಮೃತ ಕಿರಣ್ ಅಂತಿಮ ದರ್ಶನ ಪಡೆದರು.

ಪೊಲೀಸ್ ಭದ್ರತೆ: ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದ ಕಿರಣ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಯಾವುದೇ ಸಣ್ಣ- ಪುಟ್ಟ ಅಹಿತಕರ ಘಟನೆಗಳು ಸಂಭವಿಸಬಾದರೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಬದರಿಕೊಪ್ಪಲಿನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ವದಂತಿಗಳಿಗೆ ಕಿವಿಕೊಡದೆ ಸಂಪ್ರದಾಯದಂತೆ ಕಿರಣ್ ಅಂತ್ಯಕ್ರಿಯೆ ನೆರವೇರಿಸುವಂತೆ ಸಿಪಿಐ ನಿರಂಜನ್ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಮಗನ ಅಂತ್ಯಕ್ರಿಯೆಗೆ ಕೋರ್ಟ್ ಅನುಮತಿ: ಗಲಭೆ ಪ್ರಕರಣದ 17ನೇ ಆರೋಪಿ ಬದರಿಕೊಪ್ಪಲಿನ ಕುಮಾರ್ ಪುತ್ರ ಕಿರಣ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ನಾವು ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತಂದೆಗೆ ಅವಕಾಶ ನೀಡಬೇಕೆಂದು ಕಿರಣ್ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು.

ಮನವಿ ಪುರಸ್ಕರಿಸಿದ ನಾಗಮಂಗಲ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರು ನ್ಯಾಯಾಂಗ ಬಂಧನದಲ್ಲಿರುವ ಕುಮಾರ್‌ಗೆ ಬದರಿಕೊಪ್ಪಲು ಗ್ರಾಮದ ಹೊರವಲಯದಲ್ಲಿ ನಡೆಯುವ ಪುತ್ರ ಕಿರಣ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿದ್ದಾರೆಂದು ಹೇಳಲಾಗಿದೆ.