ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ನಾಗಮಂಗಲದಲ್ಲಿ ಬಿಜೆಪಿಯವರಿಂದಲೇ ಕೋಮುಗಲಭೆ ಆಗಿದೆ. ಗಲಭೆ ಮಾಡಿಸಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವುದು ಬಿಜೆಪಿಯ ಪ್ರಯತ್ನ ಎಂದು ಉಸ್ತುವಾರಿ ಸಚಿವ ಭೋಸರಾಜು ವಾಗ್ದಾಳಿ ನಡೆಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲದಲ್ಲಿ ನಡೆದ ಘಟನೆಯಲ್ಲಿ ಈಗ ಸರ್ಕಲ್ ಇನ್ಸ್‌ಪೆಕ್ಟರ್ ಅಮಾನತು ಆಗಿದೆ. ಅಲ್ಲಿನ ಎಸ್ಪಿ ಅವರಿಗೆ ನೋಟಿಸ್ ನೀಡಲಾಗಿದೆ. ಎಲ್ಲವೂ ಕೂಡ ನಾಲ್ಕೈದು ದಿನಗಳಲ್ಲಿ ಹೊರಬರಲಿದೆ. ಯಾರು ತಪ್ಪು ಮಾಡಿರುತ್ತಾರೋ ಅವರ ವಿರುದ್ಧ ಕ್ರಮವಾಗುತ್ತದೆ. ಬಿಜೆಪಿಯವರಾಗಿರಲಿ, ಆರ್ ಎಸ್ ಎಸ್, ಜೆಡಿಎಸ್ ನವರಾಗಿರಲಿ, ಯಾರೇ ಆದರೂ ಕ್ರಮ ಆಗುತ್ತದೆ ಎಂದರು.
ಕುಮಾರಸ್ವಾಮಿಯವರಿಗೆ ಬೆಳಗ್ಗೆಯಿಂದ ಸಂಜೆ ವರೆಗೆ ಆರೋಪ ಮಾಡುವುದೇ ಕೆಲಸ. ಆರೋಪ ಮಾಡುವುದಕ್ಕೆ ಕುಮಾರಸ್ವಾಮಿ, ಜೋಷಿಯವರಿಗೂ ಮತ್ತು ಜಗದೀಶ್ ಶೆಟ್ಟರಿಗೂ ಕಾಂಪಿಟೇಷನ್ ಶುರುವಾಗಿದೆ. ಅಮಿತ್ ಶಾ ಅವರ ಮುಂದೆ ಕುಮಾರಸ್ವಾಮಿ ಅವರು ಸ್ಟ್ರಾಂಗ್ ಆಗಬಾರದು ಎಂದು ಜೋಷಿಯವರಿಗೆ ಅನ್ನಿಸಿದೆ. ಹೀಗಾಗಿ ಇಷ್ಟು ವರ್ಷ ಮಾತನಾಡದ ಜೋಷಿಯವರು ಈಗ ಪ್ರತಿನಿತ್ಯ ಕಾಮೆಂಟ್ ಮಾಡುತ್ತಾರೆ. ಸಂಬಂಧ ಇರಲಿ ಇಲ್ಲದಿರಲಿ, ಸರಿಯಿರಲಿ ತಪ್ಪಿರಲಿ ನಿತ್ಯ ಇಲ್ಲಿ ಮಾತನಾಡುತ್ತಿದ್ದಾರೆ. ಇವರೆಲ್ಲ ಮಾತನಾಡಿದ ಮೇಲೆ ಅಲ್ಲಿ ಬಸನಗೌಡ ಯತ್ನಾಳ್ ಇವರೆಲ್ಲರ ವಿರುದ್ಧ ಮಾತನಾಡುತ್ತಾರೆ. ಇವರೆಲ್ಲರನ್ನು ಸರಿಪಡಿಸಲು ಆರ್ ಎಸ್ ಎಸ್ ನವರು ಇಳಿಯುತ್ತಾರೆ. ಇವರು ನಮಗೆ ಪಾಠ ಮಾಡಲು ಬರುತ್ತಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಅಮೆರಿಕದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಆಗುತ್ತಿದ್ದಾರೆಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಜೆಡಿಎಸ್ ನವರಿಗೆ ಮಾಡಲು ಬೇರೆ ಕೆಲಸವಿಲ್ಲ. ಬೆಳಗ್ಗೆಯಿಂದ ಸಂಜೆ ವರೆಗೆ ಬರೀ ಸುಳ್ಳು ಹೇಳುವುದು, ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ, ರಾಜ್ಯಕ್ಕೆ ಏನು ಅಭಿವೃದ್ಧಿ ಕೆಲಸ ಆಗಬೇಕಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಏನು ಅನ್ಯಾಯವಾಗಿದೆ ಅಂತ ಮಾತನಾಡಲ್ಲ. ರಾಜ್ಯಕ್ಕೆ ಮಲತಾಯಿ ಧೋರಣೆ ಆಗುತ್ತಿದೆ. ರಾಜ್ಯಕ್ಕೆ ಕೊಡಬೇಕಾಗಿರುವ ಅನುದಾನ ದೊರೆಯುತ್ತಿಲ್ಲ. ಇದ್ಯಾವುದರ ಬಗ್ಗೆ ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ , ಆರ್. ಅಶೋಕ್ ಅವರು ಮಾತನಾಡಲ್ಲ. ಅವರಿಗೆ ಏನಿದ್ದರೂ ಅಧಿಕಾರ ಪಡೆಯಬೇಕು ಅಷ್ಟೇ ಎಂದರು.
ಸಿದ್ದರಾಮಯ್ಯ, ಡಿಕೆಶಿ ಮತ್ತು ನಮ್ಮ ಪಕ್ಷದ ಬಗ್ಗೆ ಮಾತನಾಡುವುದಕ್ಕಿಂತ ಅವರ ಪಕ್ಷದಲ್ಲಿ ಏನು ನಡೆಯುತ್ತಿದೆ. ನೀವೆಲ್ಲರೂ ಅಶಕ್ತರಿದ್ದೀರಿ ಅಂತ ಆರ್ ಎಸ್ ಎಸ್ ಛೀಮಾರಿ ಹಾಕಿದೆ.ಇದಕ್ಕಿಂತ ಹೆಚ್ಚಿನ ಛೀಮಾರಿ ಬೇಕ ಅವರಿಗೆ. ಆರ್ ಎಸ್ ಎಸ್ ಬಂದು ಸರಿಪಡಿಸಬೇಕಾ ಅವರನ್ನು. ನಾಚಿಕೆ ಇಲ್ಲ ಅವರಿಗೆ, ನಮ್ಮ ಬಗ್ಗೆ ಮಾತನಾಡುವುದಕ್ಕೆ ಅವರು ಅಯೋಗ್ಯರು ಎಂದು ವಾಗ್ದಾಳಿ ನಡೆಸಿದರು.
ಬಿಬಿಎಂ ಗುತ್ತಿಗೆದಾರನಿಗೆ ಶಾಸಕ ಮುನಿರತ್ನ ಅಸಭ್ಯವಾಗಿ ಮಾತನಾಡಿದ ವಿಚಾರದ ಬಗ್ಗೆ ಮಾತನಾಡಿದ ಅವರು,ಈಗಾಗಲೇ ಅವರು ಮುನಿರತ್ನ ವಿರುದ್ಧ ದೂರು ನೀಡಿದ್ದಾರೆ. ಹೀಗೆ ಮಾತನಾಡಿರುವುದು ಇದು ಬಿಜೆಪಿಯವರ ಸಂಸ್ಕೃತಿಯನ್ನು ತೋರಿಸುತ್ತದೆ. ಜನರೊಂದಿಗೆ ಬಡವರೊಂದಿಗೆ ಬಿಜೆಪಿ, ಆರ್ ಎಸ್ ಎಸ್ ನವರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದು ಗೊತ್ತಾಗುತ್ತಿದೆ. ಇತ್ತೀಚೆಗೆ ಬಿಜೆಪಿಯಲ್ಲಿ ಅದು ಹೆಚ್ಚಾಗಿದೆ. ಇದರ ಬಗ್ಗೆ ಮುನಿರತ್ನ ಅವರ ರಿಯಾಕ್ಷನ್ ಇನ್ನೂ ಬಂದಿಲ್ಲ. ಇದರ ಬಗ್ಗೆ ಸಂಪೂರ್ಣ ಎಲ್ಲವೂ ಹೊರಬರಬೇಕು ಎಂದರು.