ಸಾರಾಂಶ
ಕೋಮುವಾದದ ಪರಿಣಾಮ ಬಡಜನರ ಮೇಲೆಯೇ ಬೀಳುತ್ತಿದೆ ಹೊರತು, ಶ್ರೀಮಂತರ ಮೇಲಲ್ಲ ಎಂದು ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕೋಮುವಾದದ ಪರಿಣಾಮ ಬಡಜನರ ಮೇಲೆಯೇ ಬೀಳುತ್ತಿದೆ ಹೊರತು, ಶ್ರೀಮಂತರ ಮೇಲಲ್ಲ ಎಂದು ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ ಹೇಳಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆವಿಷ್ಕಾರ ವತಿಯಿಂದ ನಡೆದ ೧೪ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವದಲ್ಲಿ ದೇವರ ನಾಡಲ್ಲಿ ಎಂಬ ಸಿನೆಮಾ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋಮುವಾದ ಒಂದು ದೊಡ್ಡ ರೋಗವಾಗಿ ಬೆಳೆಯುತ್ತಿದೆ. ಇದರ ಕೆಟ್ಟ ಪರಿಣಾಮವೂ ಬಡಜನರ ಮೇಲೆಯೇ ಆಗುತ್ತಿದೆ. ಪ್ರಗತಿಪರ ಧೋರಣೆಯನ್ನು, ಕೋಮು ಸೌಹಾರ್ದತೆಯ ಬದುಕನ್ನು ನಡೆಸಲು ಪೂರಕವಾಗುವಂತಹ ಸಂದೇಶ ಪ್ರಬಲವಾಗಿ ಪಸರಿಸಬೇಕಿದೆ ಎಂದರು.
ಆವಿಷ್ಕಾರದ ಸಂಚಾಲಕ ಹಾಗೂ ನ್ಯಾಯವಾದಿ ಎಚ್.ಟಿ.ಭರತ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾನ್ಯವಾಗಿ ಒಂದು ಕಲೆಯನ್ನು ಅಭಿವ್ಯಕ್ತ ಪಡಿಸುವಾಗ ಕಲಾವಿದ ಅಥವಾ ನಿರ್ದೇಶಕನಾಗಿರಲಿ ತಮ್ಮದೇ ಆದ ವಿಧಾನವನ್ನು ಅನುಸರಿಸಿಕೊಂಡು ಸಂದೇಶವನ್ನು ಕೊಡುತ್ತಾರೆ. ಸಿನಿಮಾದಲ್ಲಿರುವ ಉತ್ತಮವಾದ ಸಂದೇಶವೇನೆಂದರೇ ಯಾವುದೇ ದೇಶದಲ್ಲಾಗಿರಲಿ, ಯಾವುದೇ ಸಮಾಜದಲ್ಲಾಗಿರಲಿ ಸಮಾಜಘಾತುಕ ಚಟುವಟಿಕೆಗಳಿಗೆ ಬಲಿಪಶುವಾಗುತ್ತಿರುವವರು ಯಾರೋ ಶ್ರೀಮಂತರ ಮಕ್ಕಳಲ್ಲ. ಬದಲಾಗಿ ಜನಸಾಮಾನ್ಯರ ಮಕ್ಕಳು ಬಲಿಯಾಗುತ್ತಾರೆನ್ನುವ ಸನ್ನಿವೇಶಗಳು ಸಿನಿಮಾದಲ್ಲಿವೆ. ಈ ಸಿನಿಮಾದಲ್ಲಿ ಮುಖ್ಯವಾಗಿ ನಾಯಕಿ ಕೊನೆಯಲ್ಲಿ ನ್ಯಾಯದ ಪರವಾಗಿ ನಿಲ್ಲುವ ಸನ್ನಿವೇಶದಿಂದ ನಾವು ಸಹ ಉನ್ನತ ಮೌಲ್ಯ, ಉನ್ನತ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕೆನ್ನುವ ಸಂದೇಶ ಬಹಳ ಸುಂದರವಾಗಿ ಬಂದಿದೆ ಎಂದರು.ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಮಾತನಾಡಿದರು. ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಸಿದ್ಧರಾಮ ಹಿರೇಮಠ, ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಶಿವರಂಜನಿ.ಕೆ ಮುಂತಾದವರು ಪಾಲ್ಗೊಂಡಿದ್ದರು.