ಸಾರಾಂಶ
ನಿರ್ಧಿಷ್ಟ ಯೋಜನೆಯಿಂದ ಮಾತ್ರ ಅಂದುಕೊಂಡ ಕಾರ್ಯ ಯಶಸ್ವಿಗೊಳಿಸಬಹುದು
ಧಾರವಾಡ: ಶಿಕ್ಷಕರು ಹಾಗೂ ಪಾಲಕರು ಮಕ್ಕಳಲ್ಲಿರುವಂತಹ ಸಕಾರಾತ್ಮಕ ಅಂಶ ಬೇರೆಯವರೊಂದಿಗೆ ಹಂಚಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹ್ಯೂಮನ್ ಮೈಂಡಸೆಟ್‌ನ ಮಹೇಶ ಮಾಶಾಳ ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ಇಲ್ಲಿಯ ವನಿತಾ ಸೇವಾ ಸಮಾಜದ ಸಿಬ್ಬಂದಿಗಾಗಿ ಆಯೋಜನೆ ಮಾಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕರ ಕಾರ್ಯ ಉತ್ತಮ ಎನಿಸಿಕೊಳ್ಳಬೇಕಾದರೆ ಸಂವಾದ, ಸಮ್ಮತಿ, ಸಹಕಾರ, ಸಂಕಲ್ಪ ಸಾಹಸ ಈ ಐದು ಅಂಶಗಳು ಬಹು ಮುಖ್ಯವಾದ ಪಾತ್ರ ವಹಿಸುತ್ತವೆ. ಇದೇ ರೀತಿಯಾಗಿ ತರಗತಿಗಳಲ್ಲಿ ಗುರು-ಶಿಷ್ಯರ ಸಂವಾದವೂ ಇರಬೇಕು. ನಿರ್ಧಿಷ್ಟ ಯೋಜನೆಯಿಂದ ಮಾತ್ರ ಅಂದುಕೊಂಡ ಕಾರ್ಯ ಯಶಸ್ವಿಗೊಳಿಸಬಹುದು. ವಿದ್ಯಾರ್ಥಿಗಳು ಕೇಳಿರುವಂತಹ ವಿಷಯ ಶೇ. 60 ಆಗಿರುತ್ತದೆ, ಸ್ನೇಹಿತರೊಂದಿಗೆ ಹಂಚಿಕೊಂಡರೆ ಶೇ. 30ರಷ್ಟು ವೃದ್ಧಿಸುವುದು ಹೀಗೆ ಮಾಡಿದರೆ ಶೇ.90 ರಷ್ಟು ಜ್ಞಾನ ವೃದ್ಧಿಸಿಕೊಂಡಂತಾಗುತ್ತದೆ. ಕಲಿತಿರುವ ವಿಷಯ ಇನ್ನೊಬ್ಬರೊಂದಿಗೆ ಚರ್ಚೆ ಮಾಡುವುದರಿಂದ ದೀರ್ಘ ಕಾಲದವರೆಗೆ ನೆನಪಲ್ಲಿ ಉಳಿಸಿಕೊಳ್ಳಬಹುದು ಎಂದರು.ಶಿಕ್ಷಣ ಮತ್ತು ವ್ಯವಸ್ಥೆ ಉತ್ತಮ ರೀತಿಯಲ್ಲಿ ನಡೆದಾಗ ಸಮಸ್ಯೆಗಳು ಕಡಿಮೆ. ದತ್ತಾಂಶಗಳನ್ನು ಜ್ಞಾನವನ್ನಾಗಿಸುವ ಶಿಕ್ಷಕರು ಸೋಲಬಾರದು. ಶಿಕ್ಷಕರು ಮಕ್ಕಳಲ್ಲಿ ಧೈರ್ಯ ತುಂಬಬೇಕು. ಮಕ್ಕಳಲ್ಲಿರುವ ಸಾಮರ್ಥ್ಯ ಬೆಳಕಿಗೆ ತರುವಂತಹ ಕಾರ್ಯ ಮಾಡಿದರೆ ಅವರ ಪ್ರತಿಭೆ ಪ್ರಕಟವಾಗುತ್ತದೆ. ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಜಯಂತ ಕೆ.ಎಸ್.ಮಾತನಾಡಿದರು. ಪ್ರೇಮಾ ಮೇಟಿ ಪ್ರಾರ್ಥಿಸಿದರು. ಶ್ರೀಕಾಂತ್ ಹಂಜಿ ನಿರೂಪಿಸಿದರು. ಗೋಪಾಲಕೃಷ್ಣ ಕಮಲಾಪುರ ಇದ್ದರು.