ಸಾಂಸ್ಕೃತಿಕ ಮೌಲ್ಯ ಎತ್ತಿ ಹಿಡಿಯುವಲ್ಲಿ ಸಂವಾದ ಫಲಕಾರಿ

| Published : Apr 17 2024, 01:18 AM IST

ಸಾರಾಂಶ

ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಯುವ ಸಂವಾದಗಳು ಫಲಕಾರಿಯಾಗಿವೆ ಎಂದು ದಾವಣಗೆರೆ ವಿವಿ ಕುಲಸಚಿವ ಪ್ರೊ.ಯು.ಎಸ್.‌ಮಹಾಬಲೇಶ್ವರ್‌ ತಿಳಿಸಿದರು.

ಸಿರಿಗೆರೆ: ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಯುವ ಸಂವಾದಗಳು ಫಲಕಾರಿಯಾಗಿವೆ ಎಂದು ದಾವಣಗೆರೆ ವಿವಿ ಕುಲಸಚಿವ ಪ್ರೊ.ಯು.ಎಸ್.‌ಮಹಾಬಲೇಶ್ವರ್‌ ತಿಳಿಸಿದರು.

ಭರಮಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದವತಿಯಿಂದ ಆಯೋಜಿಸಲಾಗಿದ್ದ ಯುವ ಸಂವಾದ (ಯುವ ಮಂಥನ್) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯುವಸಂವಾದ ಎನ್ನುವುದು ಯುವಕರು ಮತ್ತು ಯುವತಿಯರೊಂದಿಗೆ ನಡೆಸುವ ಸಂಭಾಷಣೆಯಾಗಿದ್ದು, ಯುವಕರ ಕನಸುಗಳು, ಆಸೆಗಳು, ಸಮಸ್ಯೆಗಳು ಮತ್ತು ಅವಕಾಶಗಳ ಬಗ್ಗೆ ಮಾತನಾಡಲು ಒಂದು ವೇದಿಕೆಯನ್ನು ಒದಗಿಸಿ ಯುವಕರನ್ನು ಸಕ್ರಿಯ ಮತ್ತು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಯುವಕರಲ್ಲಿ ರಾಷ್ಟ್ರೀಯತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವುದು, ನಾಯಕತ್ವ, ಸಾಮಾಜಿಕ ಜವಾಬ್ದಾರಿಯ ಗುಣಗಳನ್ನು ಬೆಳೆಸುವುದು, ಸೃಜನಶೀಲತೆ ಮತ್ತು ಸಹಕಾರದ ಗುಣಗಳನ್ನು ಬೆಳೆಸುವುದು, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಬೆಳೆಸುವುದು ಯುವ ಸಂವಾದದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಅಶೋಕ್ ಕುಮಾರ್ ವಿ.ಪಾಳೇದ ಮಾತನಾಡಿ, ಇಂದು ಪ್ರಪಂಚ ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಸಮಸ್ಯೆಗಳ ನಿವಾರಣೆಗೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯವಿರುವ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ನೀಡಬೇಕು ಆ ನಿಟ್ಟಿನಲ್ಲಿ ಕಾಲೇಜಿನಲ್ಲಿ ಆಯೋಜಿಸಿರುವ ಮಾದರಿ ವಿಶ್ವಸಂಸ್ಥೆ ನಿಜಕ್ಕೂ ಮಹತ್ವಪೂರ್ಣವಾದದ್ದು ಎಂದು ಶ್ಲಾಘಿಸಿದರು.

ರಾಷ್ಟ್ರಗಳ ನಡುವಿನ ಸಂಘರ್ಷಗಳನ್ನು ಕೊನೆಗೊಳಿಸಲು ಭದ್ರತಾ ಮಂಡಳಿ ಖಾಯಂ ಸದಸ್ಯರಾಗಿದ್ದ ಶಕ್ತಿಶಾಲಿ ರಾಷ್ಟ್ರಗಳು ಅಳವಡಿಸಿಕೊಂಡ ಅಸಹಕಾರ ಧೋರಣೆಯಿಂದ ರಾಷ್ಟ್ರಗಳ ನಡುವೆ ಶಾಂತಿ ಮತ್ತು ಸಂಘರ್ಷಗಳನ್ನು ಕೊನೆಗೊಳಿಸುವುದು ಈಡೇರುತ್ತಿಲ್ಲ ಎಂದರು.

ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲೆ ಡಾ.ಎಸ್.‌ಶಶಿಕಲಾ ಮಾತನಾಡಿ, ಯುವಜನತೆ ಧ್ವನಿಯನ್ನು ಆಲಿಸುವುದಕ್ಕಾಗಿ ಸರ್ಕಾರ ರೂಪಿಸಿರುವ ಯುವಸಂವಾದ ಕಾರ್ಯಕ್ರಮ ನಿಜಕ್ಕೂ ಕೂಡ ಅರ್ಥಪೂರ್ಣವಾದದು. ಯುವಜನತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ದೇಶವನ್ನು ಪ್ರಗತಿಪಥದ ಕಡೆಗೆ ಕೊಂಡಯುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎನ್.ಸುಹಾಸ್, ಸಂಪನ್ಮೂಲ ವ್ಯಕ್ತಿಗ ಮಲ್ಲಿಕಾರ್ಜುನ್.ಆರ್.ಹಲಸಂಗಿ ಭಾಗವಹಿಸಿದ್ದರು. ಎನ್.ಎಸ್.‌ಸಂಗಮೇಶ್ವರ್‌ ಪ್ರಾಸ್ತಾ ವಿಕ ಮಾತುಗಳನ್ನಾಡಿದರು. ಪ್ರೊ.ಕೆ.ಎಸ್.‌ಸೌಮ್ಯ ನಿರೂಪಿಸಿದರು. ಶ್ರೀದೇವಿ ಸ್ವಾಗತಿಸಿದರು. ಎನ್ನೆಎಸಕಾರ್ಯಕ್ರಮಾಧಿಕಾರಿ ಲೋಕೇಶ್ ನಾಯಕ್ ವಂದಿಸಿದರು.