ಅಪರಾಧ ತಡೆಯಲು ಯುಜನತೆಯ ಸಹಕಾರ ಅತ್ಯಗತ್ಯ: ಎಸ್‌ಪಿ ಕೆ.ಎಂ.ಶಾಂತರಾಜು

| Published : Dec 26 2024, 01:00 AM IST

ಅಪರಾಧ ತಡೆಯಲು ಯುಜನತೆಯ ಸಹಕಾರ ಅತ್ಯಗತ್ಯ: ಎಸ್‌ಪಿ ಕೆ.ಎಂ.ಶಾಂತರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಅಪ್ರಾಪ್ತ ವಯಸ್ಸಿನ ಯುವ ಜನತೆಯು ಯಾವುದೇ ಕಾರಣಕ್ಕೂ ವಾಹನಗಳನ್ನು ಚಲಾಯಿಸಬಾರದೆಂದು, ಅಪ್ರಾಪ್ತ ವಯಸ್ಕರು ವಾಹನಗಳನ್ನು ಚಲಾಯಿಸುವುದರಿಂದ ಉಂಟಾಗುವ ಅನಾಹುತಗಳ ಕುರಿತು ಎಸ್‌ಪಿ ಕೆ.ಎಂ.ಶಾಂತರಾಜು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಕೆಜಿಎಫ್

ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯಿಂದ ರಾಬರ್ಟ್‌ಸನ್‌ಪೇಟೆಯ ಭಗವಾನ್ ಶ್ರೀ ಮಹಾವೀರ್ ಜೈನ್ ಕಾಲೇಜಿನಿಂದ ಹಮ್ಮಿಕೊಳ್ಳಲಾಗಿತ್ತು.

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆ ಆವರಣದಿಂದ ಪ್ರಾರಂಭವಾದ ಜಾಗೃತಿ ಜಾಥಾಗೆ ಕೆಜಿಎಫ್ ಎಸ್‌ಪಿ ಕೆ.ಎಂ.ಶಾಂತರಾಜು ಚಾಲನೆ ನೀಡಿ ಮಾತನಾಡಿದರು.

ಸಮಾಜದಲ್ಲಿ ಅಪರಾಧಗಳನ್ನು ತಡೆಗಟ್ಟಲು ಯುವಜನತೆಯ ಮತ್ತು ವಿದ್ಯಾರ್ಥಿಗಳ ಸಹಕಾರ ಅತ್ಯವಶ್ಯಕವಾಗಿದೆ ಎಂದು ತಿಳಿಸಿ, ಮಾದಕ ವಸ್ತುಗಳಿಂದ ಆಗುವ ಅನಾಹುತಗಳ ಬಗ್ಗೆ, ಪೋಕ್ಸೋ ಕಾಯ್ದೆಯ ಕುರಿತು, ಸೈಬರ್ ವಂಚನೆ ತಡೆಗಟ್ಟುವುದು, ಬಾಲ್ಯ ವಿವಾಹ ನಿರ್ಮೂಲನೆ, ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಕುರಿತು ಕಾನೂನು ಅರಿವು ಮೂಡಿಸಿದರು.

ಅಪ್ರಾಪ್ತ ವಯಸ್ಸಿನ ಯುವ ಜನತೆಯು ಯಾವುದೇ ಕಾರಣಕ್ಕೂ ವಾಹನಗಳನ್ನು ಚಲಾಯಿಸಬಾರದೆಂದು, ಅಪ್ರಾಪ್ತ ವಯಸ್ಕರು ವಾಹನಗಳನ್ನು ಚಲಾಯಿಸುವುದರಿಂದ ಉಂಟಾಗುವ ಅನಾಹುತಗಳ ಕುರಿತು ಎಸ್‌ಪಿ ಕೆ.ಎಂ.ಶಾಂತರಾಜು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾದಕ ದ್ರವ್ಯ, ಮಾದಕ ವಸ್ತುಗಳಿಂದ ದೂರ ಉಳಿಯಬೇಕು. ಮಾದಕ ವ್ಯಸನಿಗಳಾಗಬಾರದು. ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಹಿಸಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳನ್ನು ಬಳಸಬಾರದು ಎಂದರು.

ಭಗವಾನ್ ಶ್ರೀ ಮಹಾವೀರ್ ಜೈನ್ ಕಾಲೇಜಿನ ಎನ್‌ಎಸ್‌ಎಸ್ ಸಂಯೋಜಕ ಜಯಪಾಂಡ್ಯನ್, ಡಿವೈಎಸ್ಪಿ ಎಸ್.ಪಾಂಡುರಂಗ, ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಎಂ.ನವೀನ್, ಪಿಎಸ್‌ಐ ತ್ಯಾಗರಾಜ್, ಬಿ.ಮಂಜುನಾಥ ಇದ್ದರು.

ಜಾಗೃತಿ ಜಾಥಾ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡು, ಗಾಂಧಿ ವೃತ್ತ, ರಿಚರ್ಡ್‌ ರಸ್ತೆ, ಗೀತಾರಸ್ತೆಯ ಮೂಲಕ ಹಾದು ಬಂದು ಸೂರಜ್‌ಮುಲ್ ವೃತ್ತದಲ್ಲಿ ಸಮಾಪ್ತಿಗೊಂಡಿತು.