ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ ಸೊಳ್ಳೆ ನಿಯಂತ್ರಿಸಿ ಡೆಂಘೀ ಜ್ವರ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಅದಕ್ಕಾಗಿ ಸಮುದಾಯದ ಸಹಭಾಗಿತ್ವ ಮುಖ್ಯವಾಗಿದೆ ಎಂದು ಜಿಲ್ಲಾ ಮಲೇರಿಯಾ ನಿಯತ್ರಣಾಧಿಕಾರಿ ಡಾ.ಕುಸುಮಾ ಮಾಗಿ ಹೇಳಿದರು.ಗುರುವಾರ ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ರಾಷ್ಟ್ರೀಯ ಡೆಂಘಿ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಜನಜಾಗೃತಿ ಜಾಥಾ ಮತ್ತು ತಾಲೂಕಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರೀಯ ಕೀಟಜನ್ಯ ರೋಗಗಳ ತಡೆಗಟ್ಟುವ ಬಗ್ಗೆ ಅಭಿವೃದ್ಧಿ ಅಧಿಕಾರಿಗಳ ಪಾತ್ರದ ಬಗ್ಗೆ ಮಾಹಿತಿ ನೀಡಿ, ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ನಿಗಾ ವಹಿಸಬೇಕು. ಚರಂಡಿಗಳ ಸ್ವಚ್ಛತೆ, ಮಳೆ ನೀರು ಶೇಖರಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮಗಳಲ್ಲಿ ಸೊಳ್ಳೆಗಳ ನಿಯಂತ್ರಣಕಕೆ ಕ್ರಮ ಜರುಗಿಸಬೇಕು. ಚರಂಡಿ ಹಾಗೂ ಕೊಳಚೆ ನಿಲ್ಲುವ ಸ್ಥಳಗಳಲ್ಲಿ ಟಿಡಿಸಿ ಪೌಡರ್ ಸಿಂಪಡಣೆ, ಫಾಗಿಂಗ್ ಮಾಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.ಉಪನ್ಯಾಸಕರಾಗಿ ಆಗಮಿಸಿದ್ದ ಜಿಲ್ಲಾಮಟ್ಟದ ಡಾ.ಎಂ.ಎಲ್. ಹಸರೆಡ್ಡಿ, ಎಲ್.ವಿ. ಹಿರೇಗೌಡದ್ದಿ ಮಾತನಾಡಿ, ಡೆಂಘಿ, ಚಿಕೂನ್ ಗುನ್ಯಾ, ಮಲೇರಿಯಾ, ಆನೆಕಾಲು ರೋಗ, ಮೆದುಳು ಜ್ವರ ಹಾಗೂ ಜೀಕಾ ವೈರಸ್ ರೋಗಗಳು, ಅವುಗಳ ಲಕ್ಷಣ, ಚಿಕಿತ್ಸೆ, ತಡೆಗಟ್ಟುವ ಮಾರ್ಗಗಳು, ಆರೋಗ್ಯ ಶಿಕ್ಷಣ ಬಗ್ಗೆ ವಿವರವಾಗಿ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದರು. ಮಳೆಗಾಲದಲ್ಲಿ ಇಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸ್ವಚ್ಛತೆ ಕಾಪಾಡುವ ಮೂಲಕ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ರೋಗಳನ್ನು ತಡೆಯಬಹುದು. ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಹೇಳಿದರು.
ಡೆಂಘೇ ಚಿಕಿತ್ಸೆ ಬಗ್ಗೆ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಹೂವಪ್ಪ ಗಾಣಿಗೇರ ಮಾಹಿತಿ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎಚ್. ಮಹಾಲಿಂಗಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಸ್. ಅಂಗಡಿ ಸ್ವಾಗತಿಸಿದರು. ಆರ್.ಎಸ್. ಅಂಬಿಗೇರ ನಿರೂಪಿಸಿದರು. ಡಿ.ಇ. ಅರವಟಗಿ ವಂದಿಸಿದರು. ಡಾ.ಕೆ.ಟಿ.ಗಾಜಿ, ಕೆ.ಪಿ. ಹಂಪಿಹೋಳಿ, ಎ.ಜಿ. ನಿಲವಾಣಿ, ಲಕ್ಷ್ಮೀ ಡಬಗಲ್, ಎನ್.ಸಿ. ನಾಮದೇವ, ಮಹಾಲಿಂಗೇಶ ಯಂಡಿಗೇರಿ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.