ಹದಗೆಟ್ಟ ಸರ್ವಿಸ್ ರಸ್ತೆ, ಶಿಗ್ಗಾಂವಿಯಲ್ಲಿ ಪ್ರಯಾಣಿಕರ ಪರದಾಟ

| Published : Nov 23 2024, 12:31 AM IST

ಹದಗೆಟ್ಟ ಸರ್ವಿಸ್ ರಸ್ತೆ, ಶಿಗ್ಗಾಂವಿಯಲ್ಲಿ ಪ್ರಯಾಣಿಕರ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ಪಟ್ಟಣದ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ಸರ್ವಿಸ್ ರಸ್ತೆಯು ಸಂಪೂರ್ಣ ತಗ್ಗು ಗುಂಡಿಗಳಿಂದ ತುಂಬಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಬಸವರಾಜ ಹಿರೇಮಠಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಶಿಗ್ಗಾಂವಿ ಪಟ್ಟಣದ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ಸರ್ವಿಸ್ ರಸ್ತೆಯು ಸಂಪೂರ್ಣ ತಗ್ಗು ಗುಂಡಿಗಳಿಂದ ತುಂಬಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಸುಮಾರು ವರ್ಷಗಳಿಂದ ತಾಲೂಕು ಕೇಂದ್ರದಲ್ಲಿ ಉತ್ತಮ ರಸ್ತೆ ಕಲ್ಪಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸುಮಾರು ೪ ಕಿಮೀ ಉದ್ದದ ಎನ್.ಎಚ್ ೪ಗೆ ಹೊಂದಿಕೊಂಡಿರುವ ರಸ್ತೆ ತುಂಬಾ ಹಾಳಾಗಿದೆ. ಹಾವೇರಿ, ಹುಬ್ಬಳ್ಳಿ ಕಡೆಯಿಂದ ಪಟ್ಟಣಕ್ಕೆ ಆಗಮಿಸಿದರೆ ಸಾಕು ತಗ್ಗು ಗುಂಡಿಗಳು ಸ್ವಾಗತ ಕೋರುತ್ತವೆ. ಅಂತಹ ಸಮಸ್ಯೆ ಉಲ್ಬಣಗೊಂಡಿದೆ. ಗುಂಡಿ ತಪ್ಪಿಸಿ ವಾಹನಗಳ ಚಾಲನೆ ಮಾಡುವದು ಸವಾರರಿಗೆ ದೊಡ್ಡ ಸಾಹಸವಾಗಿ ಮಾರ್ಪಟ್ಟಿದೆ.

ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಅಕ್ಕ ಪಕ್ಕದಲ್ಲಿ ಇರುವ ಅಂಗಡಿಗಳ ಮಾಲೀಕರು ಅದರ ಹಿಂಬದಿಯ ಧೂಳಿನಿಂದ ಬೇಸತ್ತು ಹೋಗಿದ್ದಾರೆ. ಧೂಳು ಪಾನ್ ಶಾಪ್, ಶೂ ರೋಮ್, ಎಗ್ ರೈಸ್, ಹೋಟೆಲ್‌ ಪದಾರ್ಥಗಳ ಮೇಲೆ ಬಿದ್ದು ಅದನ್ನು ಸಾರ್ವಜನಿಕರಿಗೆ ನೀಡುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ. ಗ್ರಾಹಕರ ಆರೋಗ್ಯದ ಮೇಲೆ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ.

ಮಳೆ ಬಂದರಂತೂ ರಸ್ತೆ ಯಾವುದು ಗುಂಡಿ ಯಾವುದು ಎಂಬುದೇ ಅರ್ಥವಾಗುವುದಿಲ್ಲ. ರಸ್ತೆ ತುಂಬಿ ನೀರು ಹರಿಯುತ್ತದೆ. ಮಳೆ ಹೋದಮೇಲೆ ಧೂಳಿನಿಂದ ಸಮಸ್ಯೆ ಆಗುತ್ತಿದೆ. ಇದರಿಂದಾಗಿ ಹಲವು ಬೈಕ್ ಅಪಘಾತಗಳು ಆಗಿವೆ. ಹಾಳಾದ ರಸ್ತೆಗಳಿಂದಾಗಿ ಪಟ್ಟಣ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ ಅದರಿಂದ ವ್ಯಾಪಾರ ಮಾಡುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹದಗೆಟ್ಟ ರಸ್ತೆಯಿಂದಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅದಷ್ಟು ಬೇಗ ಪಟ್ಟಣಕ್ಕೆ ಸಂಪರ್ಕಿಸುವ ಸರ್ವಿಸ್ ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.