ಕಾರಂತ್‌, ಅಯ್ಯರ ಅವರೊಂದಿಗಿನ ಒಡನಾಟದಿಂದ ಬದುಕು ಸಾರ್ಥಕ: ಪ್ರೊ. ಶಂಕರ್್‌

| Published : May 19 2024, 01:47 AM IST

ಸಾರಾಂಶ

ಕುಕ್ಕಾಜೆಯ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಂಚಿ ಬಿ.ವಿ. ಕಾರಂತ ನೆನೆಪಿನ ಮಂಚಿ ನಾಟಕೋತ್ಸವಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಬಿ.ವಿ. ಕಾರಂತ್, ಜಿ.ವಿ. ಅಯ್ಯರ್ ಅವರಂತಹ ಶ್ರೇಷ್ಠ ಸಾಧಕರೊಂದಿಗಿನ ಒಡನಾಟ ನನ್ನ ಬದುಕಿಗೆ ಧನ್ಯತೆ ನೀಡಿದೆ ಎಂದು ಅಂತರಾಷ್ಟೀಯ ಜಾದೂಗಾರ್ ಪ್ರೊ. ಶಂಕರ್ ಹೇಳಿದರು.

ಅವರು ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ಮಂಚಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವುಗಳ ಸಹಯೋಗದಲ್ಲಿ ಕುಕ್ಕಾಜೆಯ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಂಚಿ ಬಿ.ವಿ. ಕಾರಂತ ನೆನೆಪಿನ ಮಂಚಿ ನಾಟಕೋತ್ಸವವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ, ಬಳಿಕ ಬಿ.ವಿ.ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ನಾಟಕದಲ್ಲಿ ಮ್ಯಾಜಿಕ್ ಬೇಕು, ಮ್ಯಾಜಿಕ್‌ನಲ್ಲಿ ನಾಟಕ ಬೇಕು ಎಂದ ಅವರು ಬಿ.ವಿ. ಕಾರಂತರ ಹೆಸರನ್ನು ಚಿರಸ್ಥಾಯಿಗೊಳಿಸಲು ರಂಗಭೂಮಿ ಟ್ರಸ್ಟ್ ಸತತ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.

ಶಿವಮೊಗ್ಗ ರಂಗಾಯಣದ ಮಾಜಿ ನಿರ್ದೇಶಕ ಸಂದೇಶ್ ಜವಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಂಚಿ ಎನ್ನುವ ಚಿಕ್ಕ ಹಳ್ಳಿಯಿಂದ ಮನೆ ಬಿಟ್ಟು ಹೋದ ವ್ಯಕ್ತಿ ಬಿ.ವಿ.ಕಾರಂತರು, ಭಾರತೀಯ ರಂಗಭೂಮಿಗೆ ವಿಶ್ವಮಾನ್ಯತೆ ತಂದುಕೊಟ್ಟವರು, ವಿಭಿನ್ನ, ವಿಶೇಷ ಪ್ರಯೋಗವನ್ನು ನಾಟಕಕ್ಕೆ ನೀಡಿದವರು ಎಂದರು. ರಂಗಭೂಮಿಗೆ ಸಂಬಂಧಪಟ್ಟ ಕೆಲಸ,‌ ಅಧ್ಯಯನ, ಸಂಶೋಧನೆ, ವಿಚಾರ ಸಂಕಿರಣ ಕಾರಂತರ ಹುಟ್ಟೂರಲ್ಲಿ ಆಗಬೇಕಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿ ಕ್ಯಾಂಪ್ಕೋ ನಿರ್ದೇಶಕ ಡಾ. ಜಯಪ್ರಕಾಶ್ ನಾರಾಯಣ ಟಿ.ಕೆ. ಮಾತನಾಡಿ, ಸಿನಿಮಾಗಳಲ್ಲಿ ಹೊಸತನದ ಕಲ್ಪನೆಯನ್ನು ಪರಿಚಯಿಸಿದವರು ಬಿ.ವಿ. ಕಾರಂತರು. ಹುಟ್ಟೂರಲ್ಲಿ ಹೆಸರಾಂತ ವ್ಯಕ್ತಿಗಳನ್ನು ನೆನೆಪಿಸಿಕೊಂಡಾಗ ನಮಗೆ ಗೌರವ ಸಿಗುತ್ತದೆ. ಆ ಮೂಲಕ ನಮ್ಮ ಸೇವೆ ಸಾರ್ಥಕ್ಯವನ್ನು ಪಡೆಯುತ್ತದೆ ಎಂದರು.

ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಸ್ವಾಗತಿಸಿದರು. ಶಿಕ್ಷಕರಾದ ಉಮನಾಥ ರೈ ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಟ ಮಿತ್ರರು ತೀರ್ಥಹಳ್ಳಿ ಇವರಿಂದ ಸಂಸಾರದಲ್ಲಿ ಸನಿದಪ ನಾಟಕ ನಡೆಯಿತು.