ಹತ್ತಿ ಬೆಳೆಗಾರರನ್ನು ನಡುನೀರಲ್ಲಿ ಕೈಬಿಟ್ಟ ಕಂಪನಿ: ಆರೋಪ

| Published : Jul 04 2025, 12:32 AM IST

ಸಾರಾಂಶ

ಹತ್ತಿ ಬೆಳೆ ಬೆಳೆಯಲು ಬಿತ್ತನೆ ಬೀಜ, ಖರ್ಚುವೆಚ್ಚಕ್ಕಾಗಿ ಮುಂಗಡ ಹಣಸಹಾಯ ಮಾಡುತ್ತಿದ್ದ ಶ್ರೀರಾಮ ಕಂಪನಿ ಈ ಬಾರಿ ರೈತರಿಗೆ ಮುಂಗಡ ಹಣ ನೀಡದೆ ಸತಾಯಿಸುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಗುಳೇದಗುಡ್ಡ ಕೃಷಿ ಕೇಂದ್ರದ ಅಧಿಕಾರಿ ಆನಂದ ಗೌಡರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಹತ್ತಿ ಬೆಳೆ ಬೆಳೆಯಲು ಬಿತ್ತನೆ ಬೀಜ, ಖರ್ಚುವೆಚ್ಚಕ್ಕಾಗಿ ಮುಂಗಡ ಹಣಸಹಾಯ ಮಾಡುತ್ತಿದ್ದ ಶ್ರೀರಾಮ ಕಂಪನಿ ಈ ಬಾರಿ ರೈತರಿಗೆ ಮುಂಗಡ ಹಣ ನೀಡದೆ ಸತಾಯಿಸುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಗುಳೇದಗುಡ್ಡ ಕೃಷಿ ಕೇಂದ್ರದ ಅಧಿಕಾರಿ ಆನಂದ ಗೌಡರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಅಂಗಡಿ ಅವರು, ತಾಲೂಕಿನ ರೈತರು 6 ವರ್ಷಗಳಿಂದ ರಾಶಿ, ಶ್ರೀಕಾರ, ತುಳಸಿ ತಳಿಯ ಶ್ರೀರಾಮ ಕಂಪನಿಯ ಹತ್ತಿ ಬಿತ್ತನೆ ಮಾಡಿ ಕಂಪನಿಯವರಿಗೆ ಹತ್ತಿ ಬೀಜ ರೈತರು ಪೂರೈಸುವುದಲ್ಲದೆ, ಅಲ್ಲದೆ ಆಳು, ಗೊಬ್ಬರಕ್ಕೆಂದು ಪ್ರತಿ ರೈತರಿಗೆ ₹75 ಸಾವಿರ ಮುಂಗಡ ನೀಡುತ್ತಿದ್ದರು. ಎಕರೆಗೆ 7 ರಿಂದ 8 ಕ್ವಿಂಟಾಲ್ ಇಳುವರಿ ಬರುತ್ತಿತ್ತು. ಕಂಪನಿ ಕ್ವಿಂಟಾಲ್ ಗೆ ₹48 ಸಾವಿರಕ್ಕೆ ಹತ್ತಿ ಖರೀದಿಸುತ್ತಿದ್ದರು. ಎಕರೆಗೆ 6 ತಿಂಗಳಲ್ಲಿ ₹4 ಲಕ್ಷ ಲಾಭ ಬರುತ್ತಿದ್ದ ಕಾರಣ ರೈತರು ಸಾಂಪ್ರದಾಯಿಕ, ಗೋವಿನಜೋಳ, ಸೂರ್ಯಕಾಂತಿ ಮುಂತಾದ ಬೆಳೆ ಬಿಟ್ಟು ಹತ್ತಿಯ ಬೆಳೆಯನ್ನೇ ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದು ಈಗ ಕಂಪನಿ ರೈತರನ್ನು ನಡು ನೀರಲ್ಲಿ ಕೈಬಿಟ್ಟಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.

ತಾಲೂಕಿನ ಆಸಂಗಿ, ಕೊಟ್ನಳ್ಳಿ, ಲಾಯದಗುಂದಿ, ಸಬ್ಬಲಹುಣಸಿ, ನಾಗರಾಳ ಎಸ್.ಪಿ., ಚಿಮ್ಮಲಗಿ, ಮಂಗಳಗುಡ್ಡ ಸೇರಿದಂತೆ ಮಲಪ್ರಭಾ ನದಿದಂಡೆಯ ರೈತರು ಹೆಚ್ಚಾಗಿ ಹತ್ತಿ ಬೆಳೆ ಬೆಳೆಯುತ್ತಿದ್ದಾರೆ. ತಾಲೂಕಿನಲ್ಲಿ ಅಂದಾಜು 2 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿದೆ. 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಸ್ತುತ ಬೀಜ ನೀಡಿ ಯಾವುದೇ ಮುಂಗಡ ನೀಡಿಲ್ಲ. ಬಿತ್ತಿದ ಹತ್ತಿ ಬೆಳೆ ಈಗ ದೊಡ್ಡದಾಗಿದೆ. ಕಂಪನಿಯವರು ಎಕರೆಗೆ ಎರಡು ಕ್ವಿಂಟಾಲ್ ಮಾತ್ರ ರೈತರಿಂದ ಖರೀದಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.

ರೈತರಿಗೆ ಹತ್ತಿ ಬೆಳೆಯಲು ಪ್ರೇರೇಪಿಸಿ ಇದೀಗ ಸ್ಪಂದಿಸದ ಹತ್ತಿ ಕಂಪನಿಗಳ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಮನವಿಯಲ್ಲಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ರೈತರಾದ ಮಲ್ಲಪ್ಪ ಹಿರೆದ್ಯಾವಪ್ಪನವರ, ಹುಲ್ಲಪ್ಪ ನಡಸೇಸಿ, ರಾಯಪ್ಪ ಘಂಟಿ, ಹನಮಪ್ಪ ಐಹೊಳೆ, ಶಶಿಧರ ಜಡಿ, ಸಿದ್ದಪ್ಪ ಸುಣಗದ ಸೇರಿದಂತೆ ಇನ್ನೂ ಅನೇಕ ರೈತರು ಇದ್ದರು.

5 ವರ್ಷಗಳಿಂದ ರೈತರಿಗೆ ಸಹಾಯ ಮಾಡಿ ಈಗ ದಿಢೀರ್‌ ವರಸೆ ಬದಲಾಯಿಸಿ ಎಕರೆಗೆ ಎರಡು ಕ್ವಿಂಟಾಲ್ ಮಾತ್ರ ಖರೀದಿಸುತ್ತೇವೆ ಎನ್ನುತಾರೆ. ಹೆಚ್ಚುವರಿ ಹತ್ತಿಯ ಗತಿ ಏನು? ಕಂಪನಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

-ಚಂದ್ರಶೇಖರ ಅಂಗಡಿ, ಅಧ್ಯಕ್ಷರು,ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕ,ಬಾಗಲಕೋಟೆ

ರೈತರ ಮನವಿಯನ್ನು ಜಿಲ್ಲಾ ಕೃಷಿ ಅಧಿಕಾರಿಗಳಿಗೆ ಕಳುಹಿಸಿ ಅವರ ಸೂಚನೆಯಂತೆ ಮುಂದಿನ ಕ್ರಮ ಜರುಗಿಸಲಾಗುವುದು.

-ಆನಂದ ಗೌಡರ ತಾಲೂಕು ಕೃಷಿ ಅಧಿಕಾರಿ, ಗುಳೇದಗುಡ್ಡ.