Medical Education Minister Dr. Sharanaprakash Patil stated that the Chief Minister will take a final decision regarding the declaration of drought and relief measures in the last week of August or the first week of September, after reviewing reports on rainfall and crop damage from all districts of the state.
- ಪ್ರತಿ ರೈತರೂ ಬೆಳೆ ವಿಮೆ ಮಾಡಿಸಲು ಸೂಚನೆ । ಹಳ್ಳಿಗಳಲ್ಲಿ ಡಂಗುರ ಸಾರಿ ಜಾಗೃತಿ ಮೂಡಿಸಲು ಕರೆ
ಕನ್ನಡಪ್ರಭ ವಾರ್ತೆ ಯಾದಗಿರಿರಾಜ್ಯದ ಎಲ್ಲ ಜಿಲ್ಲೆಗಳ ಮಳೆ ಹಾಗೂ ಬೆಳೆ ಹಾನಿ ವರದಿಗಳ ಪರಿಶೀಲಿಸಿದ ಬಳಿಕ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರ, ಪರಿಹಾರ ಘೋಷಣೆ ಕುರಿತು ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಮುಡಬೂಳ ಗ್ರಾಮದ ಹೊಲಗಳಿಗೆ ಗುರುವಾರ ಬೆಳಗ್ಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಪ್ರತಿಯೊಬ್ಬ ರೈತರೂ ಕೂಡಲೇ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಬೆಳೆವಿಮೆ ನೋಂದಣಿಗೆ ಆ.10ರಂದು ಕೊನೆಯ ದಿನವಾಗಿದ್ದು, ಪ್ರತಿ ಗ್ರಾಮದಲ್ಲೂ ಡಂಗುರ ಸಾರಿ ರೈತರಿಗೆ ಮಾಹಿತಿ ನೀಡುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ಅವರು ಕಟ್ಟುನಿಟ್ಟು ಸೂಚನೆ ನೀಡಿದರು.
ಮಳೆಯ ಅಭಾವದಿಂದ ಉಂಟಾಗಿರುವ ಬೆಳೆ ಹಾನಿಯ ಸಮಗ್ರ ವರದಿಯನ್ನು ತಕ್ಷಣ ಸಿದ್ಧಪಡಿಸಿ ಕಂದಾಯ ಇಲಾಖೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ವರ್ಷ ಕೇವಲ 1,700 ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದು, ಈ ಬಾರಿ ಈಗಾಗಲೇ 10 ಸಾವಿರ ರೈತರು ವಿಮೆ ಮಾಡಿಸಿರುವ ಮಾಹಿತಿ ಕೃಷಿ ಇಲಾಖೆಯಿಂದ ಲಭ್ಯವಾಗಿದೆ. ಉಳಿದ ರೈತರೂ ವಿಳಂಬ ಮಾಡದೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.ರಸಗೊಬ್ಬರ ವಿತರಣೆಯಲ್ಲಿ ಅಕ್ರಮಗಳ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಟೋಕನ್ ವ್ಯವಸ್ಥೆಯ ಮೂಲಕವೇ ರಸಗೊಬ್ಬರ ವಿತರಣೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು. ಡ್ಯಾಂಗಳು ಭರ್ತಿಯಾಗಿದ್ದು, ಕಾಲುವೆಗಳಿಗೆ ನೀರು ಹರಿಸಲಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬಹಳ ಪ್ರಮಾಣದಲ್ಲಿ ಬೆಳೆಗಳಿಗೆ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
* ಅದ್ಧೂರಿ ಸ್ವಾಗತ: ಮುಡಬೂಳ ಗ್ರಾಮದ ಕ್ರಾಸ್ ಹತ್ತಿರ ಸಚಿವ ಶರಣಪ್ರಕಾಶ ಪಾಟೀಲ್ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ ಭಾರಿ ಗಾತ್ರದ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು. ಮಾಜಿ ಸಚಿವ, ಶಾಸಕ ಶರಣಬಸಪ್ಪ ದರ್ಶನಾಪುರ, ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಒರಡಿಯಾ, ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ್, ತಾಲೂಕು ಪಕ್ಷದ ಅಧ್ಯಕ್ಷ ಶಿವಮಾಂತಪ್ಪ ಸಾಹು, ಮುಖಂಡರಾದ ಸಂಗಣ್ಣಗೌಡ ಮಾಲಿಪಾಟೀಲ, ಅಶೋಕ್ ಮಲ್ಲಾಬಾದಿ, ಬಸವರಾಜ ಮುದ್ನೂರ, ಶಾಂತಗೌಡ ಮಾಲಿಪಾಟೀಲ್, ಮಲ್ಲನಗೌಡ ಮಾಲಿಪಾಟೀಲ್, ಬಸವಲಿಂಗಪ್ಪ ಹವಾಲ್ದಾರ್, ಬಸವರಾಜ ಹವಾಲ್ದಾರ್, ಕೃಷ್ಣಪ್ಪ ನಾಯ್ಕೊಡಿ, ಗುರುರಾಜ ಕುಲಕರ್ಣಿ, ಗುರಣ್ಣ ಬಡಕಲ್, ಚನ್ನಬಸಪ್ಪ, ಶ್ರೀಶೈಲಪ್ಪ ಸಾಹು, ಮಲ್ಲಿಕಾರ್ಜುನ ಹೂಸಳ್ಳಿ, ದ್ಯಾವಣ್ಣ ಕುನ್ನೂರು, ಮೈಲಾರಿ ಪೂಜಾರಿ, ವೆಂಕಣ್ಣ ಯಾದವ್, ಹಣಮಂತ ಗಡಂಗ, ರೈತರು ಹಾಗೂ ಜಿಲ್ಲಾಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.====ಬಾಕ್ಸ್====
ಶಹಾಪುರ ಬರಪೀಡಿತವೆಂದು ಘೋಷಿಸಲು ಮನವಿಶಹಾಪುರ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಪರಿಣಾಮ ಹತ್ತಿ, ತೊಗರಿ ಸಹಿತ ಮುಂಗಾರು ಬೆಳೆಗಳು ತೇವಾಂಶದ ಕೊರತೆಯಿಂದ ಬಾಡುತ್ತಿವೆ. ಹೀಗಾಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಮುಡಬೂಳ ಗ್ರಾಮದ ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ ರೈತ ಅಶೋಕ ಮಲ್ಲಾಬಾದಿ ಮನವಿ ಸಲ್ಲಿಸಿದರು. ರೈತರು ಎಕರೆಗೆ ಸುಮಾರು 25 ಸಾವಿರ ರು.ವೆಚ್ಚ ಮಾಡಿದ್ದರೂ ಬೆಳೆ ಹಾನಿಗೀಡಾಗಿದ್ದು, ಪ್ರತಿ ಎಕರೆಗೆ 50 ಸಾವಿರ ರು.ಪರಿಹಾರ ನೀಡಬೇಕು. ಜತೆಗೆ ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
---ಫೋಟೊ---6ವೈಡಿಆರ್2:
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಶಹಾಪುರ ತಾಲೂಕಿನ ಮುಡಬೂಳ ಗ್ರಾಮದ ಹೊಲಗಳಿಗೆ ಗುರುವಾರ ಬೆಳಗ್ಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿ ಪರಿಶೀಲಿಸಿದರು.----
6ವೈಡಿಆರ್3:ಶಹಾಪುರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಮುಡಬೂಳ ಗ್ರಾಮದ ರೈತ ಅಶೋಕ ಮಲ್ಲಾಬಾದಿ ಮನವಿ ಸಲ್ಲಿಸಿದರು.