ಸಾರಾಂಶ
ಸಿಂಧನೂರಿನ ನ್ಯಾಯಾಲಯದ ಆವರಣದಲ್ಲಿ ಯಲಬುರ್ಗಾ ಘಟಕದ ಬಸ್ಸನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಸಿಂಧನೂರು: ಮೋಟಾರ್ ವಾಹನ ಅಪಘಾತ ಕಾಯ್ದೆ ಪ್ರಕರಣದಲ್ಲಿ ಪರಿಹಾರ ಕೊಡುವಲ್ಲಿ ಎನ್ಇಕೆಆರ್‌ಟಿಸಿ ಅಧಿಕಾರಿಗಳು ವಿಳಂಬ ಮಾಡಿದ್ದಕ್ಕೆ ನ್ಯಾಯಾಲಯದ ಆದೇಶದ ಮೇರೆಗೆ ಸಿಂಧನೂರಿನ ಬಸ್ ನಿಲ್ದಾಣದಲ್ಲಿದ್ದ ಕೊಪ್ಪಳ ವಿಭಾಗದ ಯಲಬುರ್ಗಾ ಘಟಕದ ಬಸ್ಸನ್ನು ಶುಕ್ರವಾರ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಮೋಟಾರು ವಾಹನ ಅಪಘಾತ ಕಾಯ್ದೆ (ಎಂವಿಸಿ) ಪ್ರಕರಣ ಸಂಖ್ಯೆ 240/2020 ರಲ್ಲಿ ಶ್ಯಾಮಮೂರ್ತಿ ಎಂಬುವವರು ಎನಕೆಆರ್‌ಟಿಸಿ ವಿರುದ್ಧ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಪರಿಹಾರದ ₹3,72,760 ಬಾಕಿ ಇತ್ತು. ಹಣ ಕೊಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಮುಂದುವರೆಸಿದ್ದರಿಂದ ಸಿಂಧನೂರಿನ ಹಿರಿಯ ಶ್ರೇಣಿ ನ್ಯಾಯಾಧೀಶರು ಬಸ್ ಜಪ್ತಿ ವಾರೆಂಟ್ ಜಾರಿಗೊಳಿಸಿದ್ದರು. ನ್ಯಾಯಾಲಯದ ಆದೇಶದನ್ವಯ ಬಸ್ ನಿಲ್ದಾಣದಲ್ಲಿದ್ದ ಯಲಬುರ್ಗಾ ಘಟಕದ ಬಸ್ಸನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.ಈ ವೇಳೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ ಶ್ಯಾಮಮೂರ್ತಿ ಹಾಗೂ ಅವರ ಪರ ವಕೀಲರಾದ ಶ್ರೀನಿವಾಸ್ ಬದಿ, ಶಿವಕುಮಾರ ಉಮಲೂಟಿ, ನ್ಯಾಯಾಲಯದ ಸಿಬ್ಬಂದಿ ಶ್ರೀಕಾಂತ, ಮಹಾಂತಪ್ಪ, ಬಾವಾಸಾಬ್, ನಾಗಮ್ಮ ಇದ್ದರು.