ಮುಖ್ಯರಸ್ತೆ ಭೂಸ್ವಾಧೀನ ಹಾಗೂ ಪರಿಹಾರ ಮೊತ್ತ ವಿತರಣಾ ಕಾರ್ಯ ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆದಿದ್ದು, ಒಟ್ಟು 11 ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಿಸಲಾಗಿದ್ದು, ಶನಿವಾರದವರೆಗೆ ಒಟ್ಟು ಒಂದೂವರೆ ಕೋಟಿಗೂ ಅಧಿಕ ಮೊತ್ತದ ಪರಿಹಾರ ಪಡೆದುಕೊಂಡರು.
ಬ್ಯಾಡಗಿ: ಮುಖ್ಯರಸ್ತೆ ಭೂಸ್ವಾಧೀನ ಹಾಗೂ ಪರಿಹಾರ ಮೊತ್ತ ವಿತರಣಾ ಕಾರ್ಯ ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆದಿದ್ದು, ಒಟ್ಟು 11 ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಿಸಲಾಗಿದ್ದು, ಶನಿವಾರದವರೆಗೆ ಒಟ್ಟು ಒಂದೂವರೆ ಕೋಟಿಗೂ ಅಧಿಕ ಮೊತ್ತದ ಪರಿಹಾರ ಪಡೆದುಕೊಂಡರು.ಶುಕ್ರವಾರದಿಂದ ಪಟ್ಟಣದ ಪುರಸಭೆ ಸಭಾಭವನದಲ್ಲಿ ಮುಖ್ಯರಸ್ತೆ ಭೂಸ್ವಾಧೀನ ಹಾಗೂ ಪರಿಹಾರ ಮೊತ್ತ ವಿತರಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಶನಿವಾರವು ಕಾರ್ಯ ಉಪ ವಿಭಾಗಾಧಿಕಾರಿಗಳಾದ ಕಲ್ಯಾಣಿ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ಮುಂದುವರೆಯಿತು.
ಪರಿಹಾರ ವಿತರಣೆ ಶನಿವಾರವೂ ಸಹ ಪಟ್ಟಣದ ಮುಖ್ಯರಸ್ತೆಯಲ್ಲಿ ಹಲವು ಜನರು ಕಚೇರಿಗೆ ಆಗಮಿಸಿ ತಮ್ಮ ದಾಖಲೆಗಳನ್ನು ಸಲ್ಲಿಸಿದ್ದು ಅದರಲ್ಲಿ ಎಲ್ಲ ದಾಖಲೆಗಳು ಸರಿಯಾಗಿದ್ದ ಭೂ ಮಾಲೀಕರಿಗೆ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಹಾಗೂ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಚೆಕ್ ವಿತರಿಸಿದರು.ಅಗಲೀಕರಣಕ್ಕೆ ಸಹಕರಿಸುತ್ತಿದ್ದಾರೆ: ಈ ವೇಳೆ ಮಾತನಾಡಿದ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ಮುಖ್ಯರಸ್ತೆ ನಿವಾಸಿಗಳು ಸ್ವಯಂಪ್ರೇರಿತಾಗಿ ಪರಿಹಾರದ ಮೊತ್ತ ಪಡೆದುಕೊಳ್ಳುವ ಮೂಲಕ ಅಗಲೀಕರಣಕ್ಕೆ ಸಹಕರಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲು ಇದೊಂದು ಅವಕಾಶ ಎಂದರು.ಸೋಮವಾರವೂ ಅವಕಾಶ:ಮುಖ್ಯರಸ್ತೆಯಲ್ಲಿ ಭೂ ಮಾಲೀಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣದ ಪುರಸಭೆ ಸಭಾಭವನದಲ್ಲಿ ಎಲ್ಲ ಇಲಾಖೆಗಳನ್ನು ಒಟ್ಟಿಗೆ ಸೇರಿಸಿ ನಿಯಮಾನುಸಾರ ಭೂಮಾಲೀಕರ ಭೂ ಸ್ವಾಧೀನಪಡಿಸಿಕೊಂಡ ಭೂಮಿಗೆ ಅನುಸಾರವಾಗಿ ಪರಿಹಾರ ನೀಡಲಾಗುತ್ತಿದೆ. ಸೋಮವಾರ ಬ್ಯಾಡಗಿಯಲ್ಲಿ ದಾಖಲೆ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭೂಮಾಲೀಕರು ತಮ್ಮ ದಾಖಲೆ ಸಲ್ಲಿಸಿ ಪರಿಹಾರ ಮೊತ್ತ ಪಡೆದುಕೊಳ್ಳುವಂತೆ ಕೋರಿದರು.
ಸಮಸ್ಯೆಯ ಗಂಭೀರತೆಯನ್ನ ಕಂಡು ಮುಖ್ಯರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ರು.10 ಕೋಟಿ ನೀಡಿದ್ದಾರೆ. ಭೂ ಮಾಲೀಕರು ಸುಳ್ಳುವದಂತಿಗಳಿಗೆ ಕಿವಿಗೊಡದೆ ಪರಿಹಾರ ಪಡೆದು ಅಭಿವೃದ್ದಿಗೆ ಸಹಕಾರ ನೀಡಿದಲ್ಲಿ ತಾಲೂಕಿನ ಜನರ ಬಹುಬೇಡಿಕೆಯ ಮುಖ್ಯರಸ್ತೆ ಅಗಲೀಕರಣ ಸಮಸ್ಯೆಗೆ ತಾರ್ಕಿಕ ಅಂತ್ಯ ದೊರೆಯಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಸಹಕಾರ ಹಾಗೂ ಹೊಂದಾಣಿಕೆ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಸಾಧನವಾಗಿದ್ದು, ಆದ್ದರಿಂದ ಎಲ್ಲ ಭೂ-ಮಾಲೀಕರು ತಮ್ಮ ಹಠಮಾರಿತನ ಬಿಟ್ಟು ಅಗಲೀಕರಣಕ್ಕೆ ಸಹಕರಿಸಿ ಅಭಿವೃದ್ಧಿಗೆ ಸಹಕರಿಸಿ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.
ಕಳೆದ ಎರಡು ದಿನಗಳಲ್ಲಿ ಸುಮಾರು 1.5 ಕೋಟಿಗೂ ಅಧಿಕ ಮೊತ್ತವನ್ನು ಭೂಮಾಲೀಕರಿಗೆ ಖಾತೆಗೆ (ನೆಫ್ಟ್) ಮಾಡಲಾಗಿದೆ. ಸೋಮವಾರವು ಸಹ ಪುರಸಭೆ ಸಭಾಭವನದಲ್ಲಿಯೇ ಪರಿಹಾರ ಮೊತ್ತ ನೀಡಲಾಗುತ್ತಿದ್ದು, ಇದರ ಸದುಪಯೋಗಪಡೆದುಕೊಳ್ಳಿ ಎಂದು ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೊಳ ಮುಖ್ಯಾಧಿಕಾರಿ ಹೇಳಿದರು.