ಸಾರಾಂಶ
ಪೈಪೋಟಿಯಲ್ಲಿ ಪರಣ್ಣ, ದಢೇಸ್ಗೂರು, ನವೀನ್
ಪದಾಧಿಕಾರಿಗಳು, ಕೋರ್ ಕಮಿಟಿ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಕನ್ನಡಪ್ರಭ ವಾರ್ತೆ ಕೊಪ್ಪಳ
ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಗೂ ಮುನ್ನ ಈಗ ಜಿಲ್ಲಾಧ್ಯಕ್ಷರ ಬದಲಾವಣೆ ಅಥವಾ ಮುಂದುವರೆಸುವ ಕುರಿತು ಅಭಿಪ್ರಾಯ ಸಂಗ್ರಹ ಪ್ರಾರಂಭಿಸಲಾಗಿದೆ. ಕೊಪ್ಪಳ ಜಿಲ್ಲಾಧ್ಯಕ್ಷರ ನೇಮಕ ಕುರಿತು ಪದಾಧಿಕಾರಿಗಳು ಮತ್ತು ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಭಾರಿ ಕುತೂಹಲಕ್ಕ ಕಾರವಾಗಿದೆ.ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ನವೀನ್ ಕೆ.ಎಸ್. ಉಸ್ತುವಾರಿಯಲ್ಲಿ ನರಸಿಂಗ್ ರಾವ್ ಕುಲಕರ್ಣಿ, ಕೆ.ಮಹೇಶ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಹಂತದಲ್ಲಿ ಮಾಹಿತಿ ಸಂಗ್ರಹಿಸಿದರು. ಇದಾದ ಮೇಲೆ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಿ, ಕೆ.ಎಸ್. ನವೀನ್ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.
ಹಾಲಿ ಬಿಜೆಪಿ ಅಧ್ಯಕ್ಷ ನವೀನ್ ಗುಳಗಣ್ಣವರ ನೇಮಕವಾಗಿ ಕೇವಲ 1 ವರ್ಷವಾಗಿದೆ, ಆದರೂ ಸಹ ಈಗ ಅವರನ್ನು ಬದಲಾಯಿಸುವ ಕುರಿತು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆ ದೊಡ್ಡನಗೌಡ ಪಾಟೀಲ್ ರಾಜೀನಾಮೆ ನೀಡಿದ ಹಿನ್ನೆಲೆ ಗುಳಗಣ್ಣವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಹೀಗಾಗಿ, ಈಗ ಚುನಾವಣೆ ಪ್ರಕ್ರಿಯೆಯೊಂದಿಗ ನೇಮಕ ಮಾಡಲಾಗುತ್ತದೆ. ಈಗ ಆಯ್ಕೆ ಅಥವಾ ನೇಮಕವಾದವರು ಮೂರು ವರ್ಷಗಳ ಕಾಲ ಮುಂದುವರೆಯುತ್ತಾರೆ. ನವೀನ್ ಗುಳಗಣ್ಣವರ ಸಹ ಪೈಪೋಟಿಯಲ್ಲಿದ್ದು, ಪುನರಾಯ್ಕೆಯಾದರೇ ಮೂರು ವರ್ಷ ಮುಂದುವರೆಯಲಿದ್ದಾರೆ.ಪದಾಧಿಕಾರಿಗಳ ಸಭೆಯಲ್ಲಿ ನವೀನ್ ಗುಳಗಣ್ಣವರ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೋಸ್ಗೂರು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರು ಕವಲೂರು, ಮಹೇಶ ಅಂಗಡಿ, ಶಿವಲೀಲಾ ದಳವಾಯಿ, ಮಂಜುನಾಥ ಅಂಗಡಿ ಪೈಪೋಟಿಯಲ್ಲಿದ್ದಾರೆ.
ಈ ಪೈಪೋಟಿಯಲ್ಲಿ ಇರುವವರ ಪೈಕಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ನವೀನ್ ಗುಳಗಣ್ಣವರ, ಪರಣ್ಣ, ದಢೇಸ್ಗೂರು, ಚಂದ್ರು ಕವಲೂರು ಹಾಗೂ ಮಹಾಂತೇಶ ಪಾಟೀಲ್ ನಡುವೆ ಪೈಪೋಟಿ ಜೋರಾಗಿದೆ.ಬಿಜೆಪಿಯ ಹೈಕಮಾಂಡ್ ಲೆಕ್ಕಾಚಾರದ ಪ್ರಕಾರ ಹಾಲಿ ಅಧ್ಯಕ್ಷ ನವೀನ್ ಅವರನ್ನೇ ಮುಂದುವರೆಸುವ ಸಾಧ್ಯತೆ ದಟ್ಟವಾಗಿದೆ. ಈಗ ಕೇವಲ ಪ್ರಕ್ರಿಯೇ ಮಾತ್ರ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ, ಹಿರಿಯರಿಗೆ ನೀಡಬೇಕು ಎನ್ನುವ ಕೂಗು ಸಹ ಇರುವುದರಿಂದ ಏನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.