ಜಗತ್ತಿನಲ್ಲಿ ಈಗ ವಿಚಾರಗಳ ಪೈಪೋಟಿ: ಶಂಕರ್‌

| Published : Sep 25 2024, 12:56 AM IST

ಸಾರಾಂಶ

ಅರಮನೆ ಆವರಣದಲ್ಲಿ ಆಯೋಜಿಸಿದ್ದ ‘ತರಳಬಾಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ’ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಗತ್ತಿನಲ್ಲಿರುವ ಹಲವು ವಿಚಾರಧಾರೆಗಳ ಬಗ್ಗೆ ಸಾಕಷ್ಟು ಚರ್ಚೆ, ಸಂವಾದಗಳು ನಡೆದರೂ, ಯಾವ ವಿಚಾರಧಾರೆಗಳು ಸಮಾಜ ಮತ್ತು ದೇಶದ ಏಳಿಗೆಗೆ ಪೂರಕ ಎಂದು ಮನವರಿಕೆಯಾಗದಿದ್ದರೆ, ಸರ್ವಾಧಿಕಾರಿ ವಿಚಾರಧಾರೆಗಳು ಪ್ರಾಬಲ್ಯ ಸಾಧಿಸುತ್ತದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್‌.ಶಂಕರ್‌ ಅಭಿಪ್ರಾಯಪಟ್ಟರು.

ನಗರದ ಅರಮನೆ ಆವರಣದಲ್ಲಿ ಆಯೋಜಿಸಿದ್ದ ‘ತರಳಬಾಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲೂ ಹಲವು ವಿಚಾರಧಾರೆಗಳ ಪೈಪೋಟಿಯ ಸನ್ನಿವೇಶದಲ್ಲಿ ನಾವಿದ್ದೇವೆ, ವಿಚಾರಧಾರೆಗಳು ಮತ್ತು ಅವುಗಳನ್ನು ಹೇಳುವ ರೀತಿ ಹಾಗೂ ವ್ಯಕ್ತಿಗಳು ಬೇರೆ ಆಗಿರುತ್ತದೆ. ಆದರೆ ಬಹುತೇಕ ವಿಚಾರಧಾರೆಗಳ ಚಿಂತನೆ ಒಂದೇ ಆಗಿರುತ್ತದೆ ಎಂದರು.

ಬುದ್ಧ, ಬಸವ, ಗಾಂಧಿ ಹುಟ್ಟಿದ ನಾಡಿನಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡಿ ಜೈಲಿಗೆ ಹೋಗುತ್ತಿದ್ದಾರೆ. ಇಂತಹ ಘಟನೆಗಳನ್ನು ತಡೆಯಲು ಎಲ್ಲ ಸಿದ್ಧಾಂತಗಳು ವಿಫಲವಾಗಿವೆಯೇ? ಎಲ್ಲ ಅನಾಚಾರಗಳಿಗೂ ಮನುಷ್ಯನಲ್ಲಿರುವ ಸ್ವಾರ್ಥವೇ ಕಾರಣವಾಗಿದೆ. ಸಮಾಜದ ಸವಾಲು, ಸಮಸ್ಯೆಗಳಿಗೆ ನಾಯಕರಾದವರು ಗಟ್ಟಿ ನಿಲುವು ತೆಗೆದುಕೊಳ್ಳಬೇಕು. ಕುವೆಂಪು ಅವರು ಹೇಳಿದಂತೆ ಅಲ್ಪ ಮಾನವರನ್ನು ವಿಶ್ವ ಮಾನವರನ್ನಾಗಿ ಮಾಡಲು ಶಿಕ್ಷಣದ ಜತೆಗೆ ಸಿರಿಗೆರೆ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅಂತಹ ಗುರುಗಳ ಮಾರ್ಗದರ್ಶನವೂ ಅಗತ್ಯವಿದೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಶಿಕ್ಷಣದ ಮಹತ್ವವನ್ನು ಅರಿತಿದ್ದ ಅವರು ಸ್ವಾತಂತ್ರ‍್ಯ ಪೂರ್ವದಲ್ಲೇ ಒಂದು ಶಾಲೆಯನ್ನು ಪ್ರಾರಂಭಿಸಿದ್ದರು. ಇದರ ಫಲವಾಗಿ ಇವತ್ತು ಮಠದಲ್ಲಿ ಅಪಾರ ವಿದ್ಯಾಸಂಸ್ಥೆಗಳು ಬೆಳೆದು ನಿಂತಿವೆ. ಅದರ ಫಲವಾಗಿ ಸಾಕಷ್ಟು ಜನ ವಿದೇಶದಲ್ಲಿದ್ದಾರೆ. ಶಿವಕುಮಾರ ಸ್ವಾಮೀಜಿ ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಹೇಳಿದರು. ಇದೇ ವೇಳೆ ರಾಜೇಶ್ವರಿ ಸಾದರ, ಕವಿತಾ ಸಾದರ ಅವರಿಂದ ವಚನ ಗಾಯನ ನಡೆಯಿತು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ.ಸದಾನಂದಯ್ಯ, ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ, ಮೋಹನಕುಮಾರ್ ಕೊಂಡಜ್ಜಿ, ವಡ್ನಾಳ್‌ ರಾಜಣ್ಣ, ಎಸ್.ಎಸ್.ಪಾಟೀಲ್‌, ವಿಶ್ರಾಂತ ಕುಲಪತಿ ಡಾ। ಕೆ.ಸಿದ್ದಪ್ಪ ಉಪಸ್ಥಿತರಿದ್ದರು.