ಸಾರಾಂಶ
ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗುವುದಕ್ಕೆ ಬಿಜೆಪಿಯೊಳಗೆ ಹಲವು ಮಂದಿ ಆಕಾಂಕ್ಷಿತರಿದ್ದಾರೆ.
ಮಂಡ್ಯ : ಜಿಲ್ಲಾ ಬಿಜೆಪಿ ಘಟಕಕ್ಕೆ ನೂತನ ಸಾರಥಿಯಾಗಲು ಹಾಲಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀರಂಗಪಟ್ಟಣದ ಶ್ರೀಧರ್, ಡಾ.ಸದಾನಂದ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇಬ್ಬರೂ ಪಕ್ಷದ ಜಿಲ್ಲಾಧ್ಯಕ್ಷರಾಗುವುದಕ್ಕೆ ಬಿಜೆಪಿ ಪಕ್ಷದ ತಮ್ಮ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ.
ಗುರುವಾರ ಬಿಜೆಪಿ ಕಚೇರಿಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಸ್ಥಳೀಯ ನಾಯಕರು, ಕೋರ್ ಕಮಿಟಿ ಸದಸ್ಯರು ಹಾಗೂ ನಾಲ್ಕು ತಾಲೂಕುಗಳ ಅಧ್ಯಕ್ಷರು ಭಾಗವಹಿಸಿದ್ದರು. ಚುನಾವಣಾ ಉಸ್ತುವಾರಿಗಳಾಗಿ ಆಗಮಿಸಿದ್ದ ಫಣೀಶ್ ಮತ್ತು ಸಚ್ಚಿದಾನಂದ ಅವರು ಪ್ರತ್ಯೇಕವಾಗಿ ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಿದರು.
ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗುವುದಕ್ಕೆ ಬಿಜೆಪಿಯೊಳಗೆ ಹಲವು ಮಂದಿ ಆಕಾಂಕ್ಷಿತರಿದ್ದಾರೆ. ಹಾಲಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಟಿ.ಶ್ರೀಧರ್, ಡಾ.ಸದಾನಂದ, ಸಿ.ಟಿ.ಮಂಜುನಾಥ, ಮಳವಳ್ಳಿ ಕೃಷ್ಣ ಅವರ ಹೆಸರು ಕೇಳಿಬಂದಿದ್ದರೂ ಇಂದ್ರೇಶ್, ಟಿ.ಶ್ರೀಧರ್ ಮತ್ತು ಡಾ.ಸದಾನಂದ ಅಧ್ಯಕ್ಷರಾಗುವುದಕ್ಕೆ ಹೋರಾಟ ನಡೆಸಿದ್ದಾರೆ.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಒಂದೂವರೆ ವರ್ಷ ಅಧಿಕಾರ ಪೂರೈಸಿರುವ ಡಾ.ಎನ್.ಎಸ್.ಇಂದ್ರೇಶ್ ಮೂರು ವರ್ಷ ಪೂರ್ಣಾವಧಿ ಅಧ್ಯಕ್ಷರಾಗುವುದಕ್ಕೆ ಮತ್ತೊಮ್ಮೆ ಅಖಾಡಕ್ಕಿಳಿದಿದ್ದಾರೆ. ಇವರಿಗೆ ಹಾಸನ ಮಾಜಿ ಶಾಸಕ ಪ್ರೀತಂಗೌಡ, ಪಕ್ಷದ ರಾಜ್ಯಾಧ್ಯಕ್ಷ ಡಾ.ಬಿ.ವೈ.ವಿಜಯೇಂದ್ರರವರ ಕೃಪಾಕಟಾಕ್ಷವಿದೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್ ಕೂಡ ತಮ್ಮದೇ ಕಾರ್ಯತಂತ್ರದೊಂದಿಗೆ ಪೈಪೋಟಿಗಿಳಿದಿದ್ದಾರೆ. ಡಾ.ಸದಾನಂದ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಪಕ್ಷ ತಮ್ಮನ್ನು ಅಧ್ಯಕ್ಷ ಸ್ಥಾನಕ್ಕೆ ಗುರುತಿಸಬಹುದೆಂಬ ವಿಶ್ವಾಸದಲ್ಲಿದ್ದಾರೆ. ಯಾರೊಬ್ಬರ ವಿರೋಧ ಕಟ್ಟಿಕೊಳ್ಳದೆ ತಾಳ್ಮೆ, ಸಂಯಮದಿಂದಲೇ ಪಕ್ಷದಲ್ಲಿ ಮುಂದುವರಿಯುತ್ತಿದ್ದಾರೆ. ಜಿಲ್ಲಾ ವಕ್ತಾರ ಹುದ್ದೆಯಲ್ಲಿರುವ ಸಿ.ಟಿ.ಮಂಜುನಾಥ್ ಕೂಡ ಅಧ್ಯಕ್ಷ ಸ್ಥಾನದ ಅದೃಷ್ಟ ಪರೀಕ್ಷೆಗಿಳಿದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರಿನಿಂದ ಚುನಾವಣಾ ಉಸ್ತುವಾರಿಗಳಾಗಿ ಆಗಮಿಸಿದ್ದ ಫಣೀಶ್ ಮತ್ತು ಸಚ್ಚಿದಾನಂದ ಅವರು ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿಕೊಂಡು ಪಕ್ಷದ ನಾಯಕರಿಗೆ ವರದಿ ಸಲ್ಲಿಸುವರು. ಈ ಅಭಿಪ್ರಾಯಗಳನ್ನು ಆಧರಿಸಿ ರಾಜ್ಯ ನಾಯಕರು ಇನ್ನೆರಡು ಮೂರು ದಿನಗಳೊಳಗೆ ನೂತನ ಜಿಲ್ಲಾಧ್ಯಕ್ಷರನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇದುವರೆಗೂ ಇದ್ದದ್ದು ಅಡಾಕ್ ಸಮಿತಿ:
ಬಿಜೆಪಿ ರಾಷ್ಟ್ರೀಯ, ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರ ಅವಧಿ ಕೇವಲ ಮೂರು ವರ್ಷ ಮಾತ್ರ. ಆದರೆ, ನಳೀನ್‌ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಮೂರು ವರ್ಷಕ್ಕೂ ಹೆಚ್ಚು ಕಾಲ ಕೆಲವು ಕಾರಣಗಳಿಂದ ಅಧಿಕಾರದಲ್ಲಿ ಮುಂದುವರಿದಿದ್ದರು. ಅವಧಿ ಮೀರಿದ್ದರಿಂದ ಅಡಾಕ್ ಸಮಿತಿಯನ್ನು ಜಾರಿಗೊಳಿಸಲಾಯಿತು. ಪಕ್ಷದ ರಾಜ್ಯಾಧ್ಯಕ್ಷರಾದಿಯಾಗಿ ಜಿಲ್ಲಾಧ್ಯಕ್ಷರನ್ನು ಪಕ್ಷದ ನಾಯಕರು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿತ್ತು. ಅದರಂತೆ ಜಿಲ್ಲಾಧ್ಯಕ್ಷರಾಗಿ ಸಿ.ಪಿ.ಉಮೇಶ್, ಡಾ.ಎನ್.ಎಸ್.ಇಂದ್ರೇಶ್ ಅವರು ಪಕ್ಷದ ನಾಯಕರಿಂದ ನೇರವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು.
ಅಡಾಕ್ ಸಮಿತಿ ಅವಧಿ ಪೂರ್ಣ:
ಇಲ್ಲಿಯವರೆಗೆ ಇದ್ದ ಅಡಾಕ್ ಸಮಿತಿಯ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈಗ ರಾಷ್ಟ್ರೀಯ, ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರ ಬದಲಾವಣೆ ಪ್ರಕ್ರಿಯೆಯನ್ನು ಬಿಜೆಪಿ ಇದೀಗ ಆರಂಭಿಸಿದೆ. ಜಿಲ್ಲಾಧ್ಯಕ್ಷರ ಆಯ್ಕೆಯಿಂದ ಆಯ್ಕೆ ಆರಂಭಗೊಂಡು ನಂತರ ರಾಜ್ಯಾಧ್ಯಕ್ಷ ಅಂತಿಮವಾಗಿ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು.