ಸಾರಾಂಶ
ಹೊಳಲ್ಕೆರೆ ತಾಲೂಕಿನ ಆರ್.ನುಲೇನೂರು ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಚಿತ್ರದುರ್ಗ ಡಯಟ್ನ ಜಿಲ್ಲಾ ಎನ್‌ಪಿಇಪಿ ನೋಡಲ್ ಅಧಿಕಾರಿ ಎಸ್.ಬಸವರಾಜು ಭೇಟಿ ನೀಡಿ ತಂಬಾಕು ಮುಕ್ತ ಜೀವನ ಶೈಲಿ ವಿಷಯ ಕುರಿತು ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಲು ಸ್ಪರ್ಧಾ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ಚಿತ್ರದುರ್ಗ ಡಯಟ್ನ ಜಿಲ್ಲಾ ಎನ್‌ಪಿಇಪಿ (ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ) ನೋಡಲ್ ಅಧಿಕಾರಿ ಎಸ್.ಬಸವರಾಜು ಹೇಳಿದರು.ತಾಲೂಕಿನ ಆರ್.ನುಲೇನೂರು ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿ ತಂಬಾಕು ಮುಕ್ತ ಜೀವನ ಶೈಲಿ ವಿಷಯ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಯೋಜಿಸಿರುವ ಸ್ಪರ್ಧಾ ಚಟುವಟಿಕೆಗಳ ಮಾಹಿತಿ ನೀಡಿ ಮಾತನಾಡಿದರು.ಪ್ರಸ್ತುತ ತಂಬಾಕು ಮುಕ್ತ ಪೀಳಿಗೆಯ ಕಡೆಗೆ ಶಾಲಾ ಸವಾಲು ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ, ಯುವ ಜನತೆಯಲ್ಲಿ ಮತ್ತು ಸಮುದಾಯದಲ್ಲಿ ಹೊಸ ಸಾಮಾಜಿಕ ರೂಢಿಗಳನ್ನು, ಆರೋಗ್ಯಕರ ಮತ್ತು ತಂಬಾಕು ಮುಕ್ತ ಜೀವನ ಶೈಲಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ, ಮಾತುಗಾರಿಕೆ ಅಭಿನಯ ಕೌಶಲ್ಯ ಬೆಳೆಯುತ್ತದೆ ಎಂದು ತಿಳಿಸಿದರು.
ನಿರ್ದೇಶಕರು, ಡಿಎಸ್‌ಇಆರ್‌ಟಿ ಬೆಂಗಳೂರು ಅವರ ಮಾರ್ಗದರ್ಶನದಂತೆ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸ್ಪರ್ಧೆ ಆಯೋಜಿಸಲು ಅವಕಾಶವಿದ್ದು ಪೋಸ್ಟ್ ತಯಾರಿಕೆ, ಘೋಷಣೆ ಬರವಣಿಗೆ, ಕವನ ರಚನೆ, ಬೀದಿ ನಾಟಕ ಸ್ಪರ್ಧೆಗಳನ್ನು ನಡೆಸುವ ಮೂಲಕ ತಂಬಾಕಿನ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಸ್ಪರ್ಧಾ ಚಟುವಟಿಕೆಗಳ ಉತ್ತಮ ಪ್ರಸ್ತುತಿಗಳನ್ನು (ಫೋಟೋ, ವಿಡಿಯೋ ಕ್ಲಿಪಿಂಗ್) ಆ.31ರೊಳಗೆ ಅಪ್ಲೋಡ್ ಮಾಡಬೇಕು, ಭಾಗವಹಿಸಿದ ಶಾಲೆಗಳ ವಿದ್ಯಾರ್ಥಿಗಳಿಗೆ ಪದಕ ಮತ್ತು ಮೆಚ್ಚುಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದತೀರ್ಪುಗಾರರ ಸಮಿತಿಯಿಂದಆಯ್ಕೆಯಾದಅತ್ಯುತ್ತಮ ಶಾಲೆಗಳನ್ನು ರಾಷ್ಟ್ರಮಟ್ಟದಲ್ಲಿ ಸನ್ಮಾನಿಸಲಾಗುತ್ತದೆ ಎಂದರು. ಈ ಮುಖ್ಯ ಶಿಕ್ಷಕ ಎಂ.ಶೇಖರಪ್ಪ, ಶಿಕ್ಷಕರಾದ ಕೆ.ಆರ್.ಬಸವರಾಜು, ಎಂ.ವಿ ನಾಗಶಿಲ್ಪ, ಅತಿಥಿ ಶಿಕ್ಷಕರಾದ ಹೇಮಮಾಲ, ಶ್ವೇತ ಇದ್ದರು.