26, 27 ರಂದು ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ

| Published : Oct 25 2024, 12:51 AM IST

ಸಾರಾಂಶ

ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆ ನೇಮಕಾತಿಗೆ ಅ. 26, 27 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಕಟ್ಟುನಿಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆ ನೇಮಕಾತಿಗೆ ಅ. 26, 27 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಕಟ್ಟುನಿಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ಅವರು ಗುರುವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅ. 26 ರಂದು 5 ಪರೀಕ್ಷಾ ಕೇಂದ್ರಗಳಲ್ಲಿ 2090 ಅಭ್ಯರ್ಥಿಗಳು, ಅ. 27 ರಂದು 17920 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅ.26 ರಂದು ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಕಡ್ಡಾಯ ಕನ್ನಡ ಭಾಷೆ, ಅ.27 ರಂದು ಬೆಳಿಗ್ಗೆ 10-30ರಿಂದ 12.30 ರವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಪತ್ರಿಕೆ- 2ರ ಪರೀಕ್ಷೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಪೂನ್ ಇನ್ನಿತರ ಉಪಕರಣ ಬಳಸದಂತೆ ನಿಗಾವಹಿಸಬೇಕು. ಪರೀಕ್ಷಾ ಹಿಂದಿನ ದಿನ ಸಿಸಿಟಿವಿ ಕ್ಯಾಮರಾ, ಕೇಂದ್ರದೊಳಗೆ ಪ್ರವೇಶ ಮಾಡುವಾಗ ಸಂಪೂರ್ಣ ತಪಾಸಣೆ ಮಾಡಿ ಭಾವಚಿತ್ರಗಳನ್ನು ಮೂಲ ದಾಖಲೆಗಳೊಂದಿಗೆ ಪರೀಕ್ಷೆ ಮಾಡಬೇಕು. ಅಲ್ಲದೇ ಪ್ರಶ್ನೆ ಪತ್ರಿಕೆಯನ್ನು ಅಭ್ಯರ್ಥಿಗಳಿಗೆ ನೀಡುವಾಗ ಮತ್ತು ಉತ್ತರ ಪತ್ರಿಕೆ ವಾಪಾಸ್ ಪಡೆಯುವುದನ್ನು ಹಾಗೂ ಖಜಾನೆ ಕಳುಹಿಸುತ್ತಿರುವ ಕುರಿತು ವಿಡಿಯೋ ಮಾಡಬೇಕೆಂದರು.ಪರೀಕ್ಷಾ ಕೊಠಡಿಗಳಲ್ಲಿ ಸಾಕಷ್ಟು ಗಾಳಿ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಕ್ರಮ ವಹಿಸಬೇಕು. ಪರೀಕ್ಷೆಗಳಲ್ಲಿ ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಪುರುಷ ಅಭ್ಯರ್ಥಿಗಳು ಪೂರ್ಣ ತೋಳಿನ ಶರ್ಟ್ ಧರಿಸಬಾರದು, ಮಹಿಳೆಯರು ಮಂಗಲ್ಯಸರವನ್ನು ಬಿಟ್ಟು ಬೇರೆ ಯಾವುದೇ ರೀತಿಯ ಆಭರಣಗಳನ್ನು ಧರಿಸಬಾರದು. ಕಿವಿಯಲ್ಲಿ ಇಯರ್ ಫೋನ್‌ ಹಾಕಿರುವುದನ್ನು ಪರೀಕ್ಷಿಸುವಂತೆ ಜಿಲ್ಲಾ ಆರೋಗ್ಯಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಉಪವಿಭಾಗಾಧಿಕಾರಿ ಸಂತೋಷ ಪಾಟೀಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ, ಮಾರ್ಗಾಧಿಕಾರಿಗಳು, ಅಧೀಕ್ಷಕರು, ಸ್ಥಾನಿಕ ನಿರೀಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ವೀಕ್ಷಕರು ಉಪಸ್ಥಿತರಿದ್ದರು.