ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದ ಸಿಇಟಿ, ನೀಟ್, ಜೆಇಇ ಪ್ರವೇಶ ಪರೀಕ್ಷೆಗೆ ತರಬೇತಿಯನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಈ ನಿಟ್ಟಿನಲ್ಲಿ ಅಕ್ಕಾ ಐಎಎಸ್ ಅಕಾಡೆಮಿ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮದ ಪೂರ್ವಭಾವಿಯಾಗಿ ಏ. 25ರಂದು ನಗರಸಭೆಯ ಸಭಾಂಗಣದಲ್ಲಿ ಒಂದು ದಿನದ ಪ್ರೇರಣಾ ಕಾರ್ಯಾಗಾರ ನಡೆಸಲಾಗುವುದು. ವಿಷಯ ತಜ್ಞರು ಭಾಗವಹಿಸಿ ಮಾರ್ಗದರ್ಶನ ಮಾಡಲಿದ್ದು, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಭಾಗವಹಿಸಿ ಅನುಕೂಲ ಪಡೆಯಬಹುದು ಎಂದರು.
ತರಬೇತಿಗೆ ಸಂಬಂಧಿಸಿದಂತೆ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಜೊತೆ ಸಭೆ ನಡೆಸಲಾಗಿದೆ. ತರಬೇತಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ತರಗತಿ ನೀಡುವವರಿಗೆ ಗೌರವಧನ ಸಹ ಪಾವತಿಸಲಾಗುವುದು ಎಂದು ಹೇಳಿದರು.ಸದ್ಯದಲ್ಲೇ ಪದವಿ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರ ಜೊತೆಗೂ ಸಭೆ ನಡೆಸಲಾಗುವುದು. ಪಿಯು ಮತ್ತು ಪದವಿ ಬೋಧಕರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಬಳಸಿಕೊಳ್ಳುವ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್ ಮೂಲಕವೂ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ನಗರಸಭೆಯ ಪೌರಾಯುಕ್ತ ಡಾ. ಜಯಣ್ಣ ಮಾತನಾಡಿ, ನಮೂನೆ 3ಎ (ಬಿ–ಖಾತೆ) ಅಭಿಯಾನದಡಿ ನಗರಸಭೆಯು ಇದುವರೆಗೆ ಐದು ಸಾವಿರ ಅರ್ಜಿಗಳನ್ನು ವಿತರಣೆ ಮಾಡಿದೆ. ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿರುವವರ ಸಂಖ್ಯೆ ಕೇವಲ 400. ಈ ಪೈಕಿ, 130 ಮಂದಿಗೆ ಬಿ–ಖಾತೆ ವಿತರಿಸಲಾಗಿದೆ ಎಂದರು.130 ಅರ್ಜಿಗಳಿಗೆ ಚಲನ್ ಜನರೇಟ್ ಮಾಡಲಾಗಿದೆ. ಆದರೆ, ಕೆಲವರು ವ್ಯತ್ಯಾಸದ ಮೊತ್ತವನ್ನು ಪಾವತಿಸಿಲ್ಲ. ಮೊತ್ತ ಪಾವತಿಸದ ಹೊರತು ಮುಂದಿನ ಪ್ರಕ್ರಿಯೆ ನಡೆಸಲು ಸಾಧ್ಯವಾಗುವುದಿಲ್ಲ. ಫೆ.18ರಿಂದ ಆರಂಭವಾಗಿರುವ ಅಭಿಯಾನ ಮೇ 10ರವರೆಗೆ ನಡೆಯಲಿದೆ. ಅರ್ಜಿ ಸಲ್ಲಿಸಿರುವವರು ಅಷ್ಟರೊಳಗೆ ಬಿ-ಖಾತೆ ಪಡೆಯದಿದ್ದರೆ, ಮತ್ತೆ ಇಂತಹ ಅವಕಾಶ ಸಿಗುವುದಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಆಯೇಷಾ ಬಾನು, ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಸಿ.ಸೋಮಶೇಖರ್, ನರಸಿಂಹ, ಅಜ್ಮತ್, ನಾಗಮ್ಮ, ಸಮದ್, ಅಧಿಕಾರಿಗಳಾದ ಕಿರಣ್, ನಟರಾಜೇಗೌಡ ಇತರರಿದ್ದರು.ಜನಹಿತ ಸಾಫ್ಟ್‌ವೇರ್‌ನಲ್ಲಿ ಸಮಸ್ಯೆನಗರಸಭೆಯು ಆರಂಭಿಸಿರುವ ಇ–ಖಾತೆ ಅಭಿಯಾನ ಮುಂದುವರಿದಿದ್ದು, ಸಾರ್ವಜನಿಕರನ್ನು ನಗರಸಭೆಗೆ ಕರೆದು ಇ–ಖಾತೆ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ. ಕೆಲ ದಿನಗಳಿಂದ ಜನಹಿತ ಸಾಫ್ಟ್‌ವೇರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಇ–ಖಾತೆ ಪ್ರಕ್ರಿಯೆ ವಿಳಂಬವಾಗಿದೆ.
- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ