ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಸುವುದು ಅಗತ್ಯ. ಸ್ಪರ್ಧೆಯಲ್ಲಿ ಸೋಲು ಗೆಲವು ಮುಖ್ಯವಲ್ಲವೆಂದು ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್ ಹೇಳಿದರು.ನಗರದ ಡಯಟ್‍ನಲ್ಲಿ ಡಿಎಸ್ಇಆರ್ ಟಿ ವತಿಯಿಂದ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಅಡಿಯಲ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪಾತ್ರಾಭಿಯ ಮತ್ತು ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಬೇಕು. ಆರೋಗ್ಯಕರವಾದ ಸ್ಪರ್ಧಾ ಭಾವನೆ ಬೆಳೆಸಿಕೊಳಬೇಕು. ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಕ್ರಿಯಾಶೀಲತೆ ಬೆಳೆಯುತ್ತದೆ, ಮನೋವಿಕಾಸಕ್ಕೂ ದಾರಿಯೊದಗಿಸುತ್ತದೆ ಎಂದರು.ಜಿಲ್ಲಾ ನೋಡಲ್ ಅಧಿಕಾರಿ ಎಸ್. ಬಸವರಾಜು ಮಾತನಾಡಿ, ಎನ್ ಪಿಇಪಿ ಭಾರತ ಸರ್ಕಾರದ ಧನಸಹಾಯ ಪಡೆದ ಮೌಲ್ಯಯುತ ಯೋಜನೆಯಾಗಿದೆ. ಶಾಲೆಗಳಲ್ಲಿ ಶೈಕ್ಷಣಿಕ ಕಲಿಕೆಯೊಂದಿಗೆ ಸ್ಪರ್ಧಾ ಸಹಪಠ್ಯ ಚಟುವಟಿಕೆಗಳ ಮೂಲಕ ಜೀವನ ಕೌಶಲ್ಯವನ್ನು ಬೆಳೆಸುವ ಸನ್ನಿವೇಶ ಕಲ್ಪಿಸಿ ಜನಸಂಖ್ಯೆ ಸುಸ್ಥಿರ ಅಭಿವೃದ್ಧಿ ನಡುವಿನ ಅಂತರ್ ಸಂಬಂಧದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಇದು ಸಹಕಾರಿಯಾಗಿದೆ ಎಂದು ತಿಳಿಸಿದರು.ಸ್ಪರ್ಧೆಗಳು ಥೀಮ್ ಆಧಾರಿತವಾಗಿದ್ದು ಶಾಲಾ ಹಂತ. ತಾಲೂಕು, ಜಿಲ್ಲಾ, ಪ್ರಾದೇಶಿಕ, ರಾಷ್ಟ್ರ ಹಂತದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳಲ್ಲಿ ಮಾತುಗಾರಿಕೆ, ಅಭಿನಯ ಕೌಶಲ್ಯ, ವರ್ತನೆಗಳು, ಜೀವನ ಕೌಶಲ್ಯಗಳು, ಸಂವೇದನಾಶೀಲತೆ ಬೆಳೆಸಲು ಸ್ಪರ್ಧಾ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು. ಪಾತ್ರಾಭಿನಯ ಸ್ಪರ್ಧೆಯಲ್ಲಿ ಹೊಸದುರ್ಗ ಸ.ಪ.ಪೂ ಕಾಲೇಜು (ಪ್ರೌಢಶಾಲಾ ವಿಭಾಗ) ಪ್ರಥಮ, ಹೊಳಲ್ಕೆರೆ ಹಿರೆಎಮ್ಮಿಗನೂರು ಸರ್ಕಾರಿ ಪ್ರೌಢಶಾಲೆ ದ್ವಿತೀಯ, ಚಿತ್ರದುರ್ಗ ಜಿ.ಆರ್ ಹಳ್ಳಿ ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದಿದ್ದು, ಜಾನಪದ ನೃತ್ಯ ಸ್ಪರ್ಧೆಯಲ್ಲಿ ಹೊಳಲ್ಕೆರೆ ಎನ್.ಜಿ ಹಳ್ಳಿ ಸರ್ಕಾರಿ ಪ್ರೌಢಶಾಲೆ ಪ್ರಥಮ, ಚಳ್ಳಕೆರೆ ತಿಮ್ಮಪ್ಪಯ್ಯನ ಹಳ್ಳಿ ದ್ವಿತೀಯ, ಹೊಸದುರ್ಗ ತಂಡಗ ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದಿವೆ. ಜಿಲ್ಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ತಂಡ ರಾಜ್ಯಮಟ್ಟದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ತಿಳಿಸಿದರು. ಉಪನ್ಯಾಸಕರಾದ ವಿ. ಕನಕಮ್ಮ, ತಾಂತ್ರಿಕ ಸಹಾಯಕ ಅವಿನಾಶ್, ಮುಖ್ಯ ಶಿಕ್ಷಕ ಸುರೇಂದ್ರ ನಾಯಕ್, ತೀರ್ಪುಗಾರರಾದ ಡಾ. ಚಾಂದ್ ಸುಲ್ತಾನ, ವೇಣುಗೋಪಾಲ್, ನಾಗರತ್ನ, ನಾಗವಲ್ಲಿ ಶಾಸ್ತ್ರಿ, ಸಿಂಧು, ಅಶ್ವಿನಿ ಚಂದ್ರಶೇಖರ್, ಮಾರ್ಗದರ್ಶಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.