ಪ್ರೀತಿಯ ಪ್ರವಾಹ ಹರಿಸಿದ ಸಂಕಲನಗಳು

| Published : May 25 2024, 12:58 AM IST / Updated: May 25 2024, 12:59 AM IST

ಸಾರಾಂಶ

ಕಾರಣಾಂತರಗಳಿಂದ ಪ್ರೀತಿಸುವ ಮನಸುಗಳಿಗಿಂತ ಮನುಷ್ಯತ್ವದ ಹಿನ್ನೆಲೆಯ ಪ್ರೀತಿ ದೊಡ್ಡದು ಎಂದು ಧಾರವಾಡದ ಹಿರಿಯ ಕಲಾವಿದ ಡಾ.ಶಶಿಧರ ನರೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಾರಣಾಂತರಗಳಿಂದ ಪ್ರೀತಿಸುವ ಮನಸುಗಳಿಗಿಂತ ಮನುಷ್ಯತ್ವದ ಹಿನ್ನೆಲೆಯ ಪ್ರೀತಿ ದೊಡ್ಡದು ಎಂದು ಧಾರವಾಡದ ಹಿರಿಯ ಕಲಾವಿದ ಡಾ.ಶಶಿಧರ ನರೇಂದ್ರ ಹೇಳಿದರು.

ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಭಾಂ ಗಣದಲ್ಲಿ ಭಾನುವಾರ ಸೇಡಂನ ಸಂಸ್ಕೃತಿ ಪ್ರಕಾಶನ ಆಯೋಜಿಸಿದ್ದ ಸಮಾರಂಭದಲ್ಲಿ ಡಾ. ಅಂಬುಜಾ ಮಳಖೇಡಕರ್ ರಚಿಸಿದ ಐದು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ, ಅವರು ಮಾತನಾಡಿದರು.

ಕೇವಲ ಪದಗಳ ಜೋಡಣೆ ಕಾವ್ಯ ವಾಗಲಾರದು. ಬದಲಿಗೆ ಧ್ವನಿಪೂರ್ಣವಾದ ಮಾತುಗಳೇ ಕಾವ್ಯವಾಗುತ್ತದೆ. ಡಾ.ಅಂಬುಜಾ ಅವರ ಎಲ್ಲ ಕವನಗಳಲ್ಲಿ ಈ ರೀತಿಯ ಸಾಲುಗಳು ಹೇರಳವಾಗಿವೆ ಎಂದರು.

ಡಾ.ಅಂಬುಜಾ ಮಳಖೇಡಕರ್ ರಚಿಸಿದ ‘ಗೊಂಬೆಯ ಜೀವನ’ ಕೃತಿಯನ್ನು ಕನ್ನಡ ಉಪನ್ಯಾಸಕಿ ಡಾ.ವಿದ್ಯಾವತಿ ಪಾಟೀಲ ಪರಿಚಯಿಸಿದರು.

ಮನ ಹರಿ ಧ್ಯಾನ ಮಂದಿರ, ದಡ ಸೇರಿಸೆನ್ನ ಹರಿಯೇ ಕೃತಿಗಳನ್ನು ಕವಯತ್ರಿ ಕಾವ್ಯಶ್ರೀ ಮಹಾಗಾಂವ ಪರಿಚಯಿಸಿದರು. ಪ್ರೇಮ ಪದನಿಸ ಕೃತಿಯನ್ನು ಉಪನ್ಯಾಸಕ ಡಾ.ಎಂ.ಬಿ.ಕಟ್ಟಿ ಪರಿಚಯಿದರು. ರಾಜನ ನಂಟು ಕನ್ನಡಿಯ ಗಂಟು ಕೃತಿಯನ್ನು ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಪರಿಚಯಿಸಿದರು.

ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ರಾಜೇಂದ್ರ ಬಿ.ಕೊಂಡ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕಗಳನ್ನು ಪ್ರಕಟಿಸಿದ ಸೇಡಂನ ಸಂಸ್ಕೃತಿ ಪ್ರಕಾಶನದ ಸಂಚಾಲಕ ಪ್ರಭಾಕರ ಜೋಶಿ ಮಾತನಾಡಿ, ತಾಲೂಕು ಕೇಂದ್ರವೊಂದರಲ್ಲಿದ್ದುಕೊಂಡು ನೂರಾರು ಕೃತಿಗಳನ್ನು ಪ್ರಕಟಿಸುವ ಮೂಲಕ ಹಲವಾರು ಯುವ ಲೇಖಕರಿಗೆ ವೇದಿಕೆಯನ್ನು ಒದಗಿಸಿದೆ ಎಂದರು.

ಕವಯತ್ರಿ ಡಾ.ಅಂಬುಜಾ ಮಳಖೇಡಕರ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.