ಹಣ ವಸೂಲಿ ಮಾಡುತ್ತಿರುವ ನಕಲಿ ಪತ್ರಕರ್ತರ ಮೇಲೆ ದೂರು ನೀಡಿ

| Published : Jun 14 2024, 01:01 AM IST

ಹಣ ವಸೂಲಿ ಮಾಡುತ್ತಿರುವ ನಕಲಿ ಪತ್ರಕರ್ತರ ಮೇಲೆ ದೂರು ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿ ಯುಟ್ಯೂಬ್ ಚಾನೆಲ್ ಪತ್ರಕರ್ತರು ಎಂದು ಹೆಸರು ಹೇಳಿ ದಿನಂಪ್ರತಿ ಹಣ ವಸೂಲಿ ಮಾಡುತ್ತಿರುವ ನಕಲಿ ಪತ್ರಕರ್ತರ ಮೇಲೆ ಯಾವುದೇ ಮುಲಾಜಿಲ್ಲದೆ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಮನವಿ ಮಾಡಿದೆ.

ಬೈಲಹೊಂಗಲ: ಗ್ರಾಮೀಣ ಪ್ರದೇಶಗಳಲ್ಲಿ ಯುಟ್ಯೂಬ್ ಚಾನೆಲ್ ಪತ್ರಕರ್ತರು ಎಂದು ಹೆಸರು ಹೇಳಿ ದಿನಂಪ್ರತಿ ಹಣ ವಸೂಲಿ ಮಾಡುತ್ತಿರುವ ನಕಲಿ ಪತ್ರಕರ್ತರ ಮೇಲೆ ಯಾವುದೇ ಮುಲಾಜಿಲ್ಲದೆ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಮನವಿ ಮಾಡಿದೆ. ತಾಲೂಕು ಘಟಕ ಅಧ್ಯಕ್ಷ ಮಹಾಂತೇಶ ತುರಮರಿ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ದಿನದಿಂದ ದಿನಕ್ಕೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚುತ್ತಿದೆ. ಇದರಿಂದ ಜನ ಸಾಮಾನ್ಯರು, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ನೌಕರರು, ಖಾಸಗಿ ನೌಕರರು ಕೆಲಸ ಮಾಡುವುದು ಕಷ್ಟವಾಗುತ್ತಿದೆ. ನಕಲಿ ಪತ್ರಕರ್ತರು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ತಾಲೂಕು ಪತ್ರಕರ್ತರ ಸಂಘಕ್ಕೆ ದೂರು ಬಂದಿವೆ ಎಂದರು. ಅಲ್ಲದೆ ತಾಲೂಕಿನ ಬೆಳವಡಿ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಿಗೆ ನಕಲಿ ಪತ್ರಕರ್ತರ ಜಾಲ ಸುತ್ತಾಡುತ್ತಿದ್ದು, ಅಲ್ಲಲ್ಲಿ ಉದ್ಯೋಗ ಮಾಡುತ್ತಿರುವ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿರುವರನ್ನು ಭೇಟಿಯಾಗಿ ಇಲ್ಲ ಸಲ್ಲದ ಆರೋಪಗಳನ್ನು ಅವರ ಮೇಲೆ ಹೊರೆಯಿಸಿ ಹಣಕ್ಕೆ ಬೇಡಿಕೆ ಇಟ್ಟು, ಕೊಡದಿದ್ದರೆ ಟಿವಿ ಚಾನೆಲಗಳಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಈಗಾಗಲೇ ಓರ್ವ ವ್ಯಕ್ತಿಯನ್ನು ಹೆದರಿಸಿ ಹಣ ಪಡೆದಿದ್ದಾರೆ. ಮತ್ತೆ ಮತ್ತೊಬ್ಬರನ್ನು ಕಳಿಸಿ ನಮ್ಮ ಚಾನೆಲ್‌ ದೊಡ್ಡದಿದ್ದು, ನಿನ್ನ ಬಗ್ಗೆ ಆರೋಪಗಳು ಕೇಳಿ ಬಂದಿವೆ. ನೀನು ನಾನಿದ್ದಲ್ಲಿ ಬಂದು ಹಣ ಕೊಡಬೇಕೆಂದು ದೂರವಾಣಿ ಮೂಲಕ ಸತಾಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದೂರವಾಣಿ ಮೂಲಕ ವ್ಯಕ್ತಿಗೆ ಕರೆ ಮಾಡಿ ಧಮಕಿ ಹಾಕಿ ಬ್ಲಾಕಮೇಲ್ ಮಾಡುತ್ತ, ಟಿವಿ ನೋಡುತ್ತ ಕುಳಿತಿರಿ ನಿಮ್ಮ ಬಗ್ಗೆ ವರದಿ ಪ್ರಸಾರವಾಗುತ್ತೆ ಎಂದು ಸತಾಯಿಸುತ್ತಿರುವುದಾಗಿ ತಿಳಿದು ಬಂದಿದೆ. ಅಲ್ಲಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಅಂತಹ ನಕಲಿ ಪತ್ರಕರ್ತರು ಎಂದು ಕಂಡು ಬಂದಲ್ಲಿ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ತಿಳಿಸಿದ್ದಾರೆ.