ಸಾರಾಂಶ
ತಾಲೂಕು ಕಚೇರಿ, ಕೃಷಿ ಇಲಾಖೆ, ಸರ್ವೇ ಇಲಾಖೆ, ಪುರಸಭೆ, ಕಂದಾಯ ಇಲಾಖೆ ಸೇರಿ ವಿವಿಧ ಇಲಾಖೆಗಳಿಂದ ಸಾರ್ವಜನಿಕರು ಸುಮಾರು ೩೦ ಅರ್ಜಿಗಳನ್ನು ಸಲ್ಲಿಸಿದ್ದು, ಸುಮಾರು ೧೫ಕ್ಕೂ ಹೆಚ್ಚು ಅರ್ಜಿದಾರರ ಸಮಸ್ಯೆಗಳನ್ನು ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆ ಹರಿಸುವಂತೆ ಸೂಚಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಾಲೂರು
ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳು ವಿಳಂಬ ಮಾಡುವುದು ಅಥವಾ ಹಣ ಕೇಳಿದಾಗ ಸಾರ್ವಜನಿಕರು ನೇರವಾಗಿ ಇಲಾಖೆಗೆ ಬಂದು ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೋಲಾರ ಜಿಲ್ಲಾ ಲೋಕಾಯುಕ್ತ ಎಸ್ಪಿ ಉಮೇಶ್ ಹೇಳಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಕೋಲಾರ ಜಿಲ್ಲಾ ಲೋಕಾಯುಕ್ತ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಹಣ ಕೊಟ್ಟರೆ ಮಾತ್ರ ಕೆಲಸಗಳಾಗುತ್ತವೆ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಾರೆ, ಅದರೆ ಲೋಕಾಯುಕ್ತ ಕಚೇರಿಗೆ ಬಂದು ದೂರು ಕೊಡುವವರೇ ಇಲ್ಲವಾಗಿದೆ. ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬಂದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬಹುದು, ಆದ್ದರಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಕೆಲಸ ವಿಳಂಬವಾದರೂ ಸಹ ದೂರ ನೀಡಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸರ್ಕಾರಿ ಅಧಿಕಾರಿಗಳು ಸರ್ಕಾರದ ಕೆಲಸ ದೇವರ ಕೆಲಸ ಎಂಬಂತೆ ಸರ್ಕಾರಿ ಸೌಲಭ್ಯಗಳನ್ನು ಸಾರ್ವಜನಿಕರಿಗೆ ದೊರಕಿಸಿಕೊಡಬೇಕು. ಜನರನ್ನು ಕಚೇರಿಗೆ ಅಲೆದಾಡಿಸದೇ ಸರಿಯಾದ ಸಮಯಕ್ಕೆ ಭ್ರಷ್ಟಾಚಾರ ರಹಿತವಾಗಿ ಕಾರ್ಯನಿರ್ವಹಿಸಬೇಕು, ಇಲ್ಲದಿದ್ದಲ್ಲಿ ಯಾವುದೇ ದೂರುಗಳು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕು ಕಚೇರಿ, ಕೃಷಿ ಇಲಾಖೆ, ಸರ್ವೇ ಇಲಾಖೆ, ಪುರಸಭೆ, ಕಂದಾಯ ಇಲಾಖೆ ಸೇರಿ ವಿವಿಧ ಇಲಾಖೆಗಳಿಂದ ಸಾರ್ವಜನಿಕರು ಸುಮಾರು ೩೦ ಅರ್ಜಿಗಳನ್ನು ಸಲ್ಲಿಸಿದ್ದು, ಸುಮಾರು ೧೫ಕ್ಕೂ ಹೆಚ್ಚು ಅರ್ಜಿದಾರರ ಸಮಸ್ಯೆಗಳನ್ನು ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆ ಹರಿಸುವಂತೆ ಸೂಚಿಸಲಾಗಿದೆ ಎಂದರು.
ಲೋಕಾಯುಕ್ತ ಡಿವೈಎಸ್‌ಪಿ ಸೂರ್ಯನಾರಾಯಣ, ಇನ್ಸ್ಪೆಕ್ಟರ್ ಯಶವಂತ್, ತಹಸೀಲ್ದಾರ್ ಕೆ.ರಮೇಶ್, ತಾಪಂ ಇಒ ವೀಣಾ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಹಾಜರಿದ್ದರು.