ಸಾರಾಂಶ
ಧಾರವಾಡ: ವಿಕಲಚೇತನರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳು ಅನರ್ಹರಿಗೆ ತಲುಪುತ್ತಿವೆ ಎಂಬ ಆರೋಪಗಳಿದ್ದು, ಈ ಕುರಿತು ತಮಗೆ ದೂರು ಸಲ್ಲಿಸಿದರೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಆಯುಕ್ತ ದಾಸ್ ಸೂರ್ಯವಂಶಿ ಭರವಸೆ ನೀಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ವಿಕಲಚೇತನರಿಗೆ ದೊರೆಯುವ ಸೌಲಭ್ಯಗಳನ್ನು ಪಡೆಯಲಾಗುತ್ತಿದೆ ಎಂಬ ಆರೋಪಗಳಿವೆ. ಈ ಮೊದಲು ಇಂತಹ ಸಾಧ್ಯತೆಗಳಿದ್ದು, ಇತ್ತೀಚೆಗೆ ಪಾರದರ್ಶಕ ವ್ಯವಸ್ಥೆ ಮೂಲಕ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳನ್ನು ನಿಲ್ಲಿಸಲಾಗುತ್ತಿದೆ. ಇಷ್ಟಾಗಿಯೂ ಇಲಾಖೆಯಲ್ಲಿ ಭ್ರಷ್ಟಾಚಾರ, ಅನರ್ಹರಿಗೆ ಸೌಲಭ್ಯ ವಿತರಣೆ ಪ್ರಕರಣಗಳಿದ್ದರೆ ತಾವು ಸಂಬಂಧಿಸಿದ ಅಧಿಕಾರಿಗಳು ಹಾಗೂ ಫಲಾನುಭವಿಗಳ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 13 ಲಕ್ಷ ವಿಕಲಚೇತನರು ಇದ್ದಾರೆ. ಆದರೆ, ಕೇಂದ್ರ ಸರ್ಕಾರ 21 ವಿಭಾಗಗಳಲ್ಲಿ ವಿಕಲಚೇತರನ್ನು ಗುರುತಿಸಿದ್ದು ಈ ಸಂಖ್ಯೆ ಮೂರು ಪಟ್ಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಕಾಳಜಿಯಿಂದ ಕೆಲಸ ಮಾಡಲು ಸೂಚನೆ ನೀಡಿದ್ದು, ನೈಜ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಲ್ಲಿ ರಾಜ್ಯಾದ್ಯಂತ ಪ್ರವಾಸದ ಮೂಲಕ ಸಭೆಗಳನ್ನು ಮಾಡುತ್ತಿದ್ದೇನೆ ಎಂದರು.
ಪ್ರಮುಖವಾಗಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಸೇರಿದಂತೆ ಸರ್ಕಾರದ ಪ್ರತಿಯೊಂದು ಇಲಾಖೆಗಳಲ್ಲಿ ವಿಕಲಚೇತನರಿಗೆ ಹತ್ತು ಹಲವು ಸೌಲಭ್ಯಗಳಿವೆ. ವಿಕಲಚೇತನರಿಗಾಗಿಯೇ ಇರುವ ಸೌಲಭ್ಯಗಳ ಬಗ್ಗೆ ಇಲಾಖೆಗಳ ಅಧಿಕಾರಿಗಳು ಪ್ರಚಾರ ಮಾಡಿ ಅವುಗಳನ್ನು ಮುಟ್ಟಿಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ನಾನೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವಿವಿಧ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲು ಮನವಿ ಮಾಡಲಿದ್ದೇನೆ ಎಂದ ಅವರು, ವಿಕಲಚೇತನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹತ್ತು ಹಲವು ಯೋಜನೆಗಳಿದ್ದು ಅವುಗಳ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.ರಾಷ್ಟ್ರೀಯ ಬಾಲ್ಯಸ್ವಾಸ್ಥ್ಯ ಕಾರ್ಯಕ್ರಮದ ಅಡಿ 0-18 ವರ್ಷದೊಳಗಿನ ಮಕ್ಕಳನ್ನು ಸಂಪೂರ್ಣ ಆರೋಗ್ಯ ಚಿಕಿತ್ಸೆಗೆ ಒಳಪಡಿಸಿ ಮಗುವಿನಲ್ಲಿರುವ ನ್ಯೂನ್ಯತೆಯನ್ನು ಪತ್ತೆ ಹಚ್ಚಿ ಅದಕ್ಕೆ ಪರಿಹಾರ ಒದಗಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಮಾಡಬೇಕು. ವಿಕಲಚೇತನ ಮಗುವಿಗೆ ಮನೆಗೆ ಹೋಗಿಯೇ ಶಿಕ್ಷಣ ಪೂರೈಸಬೇಕು. ರಾಜ್ಯದಲ್ಲಿರುವ ವಸತಿ ಶಾಲೆಗಳಿಗೆ ಶೇ. 25ರಷ್ಟು ಅಂಗವಿಕಲತೆ ಇದ್ದರೂ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೇ ನೇರ ನೇಮಕಾತಿ ಮಾಡಿಕೊಳ್ಳಬೇಕು. ಅಪೆಕ್ಸ್ ಬ್ಯಾಂಕ್ ಜೊತೆಗೆ ಸರ್ಕಾರ ಒಡಂಬಂಡಿಕೆ ಮಾಡಿಕೊಳ್ಳುತ್ತಿದ್ದು ವಿಕಲಚೇತನರು ಸ್ವ ಉದ್ಯೋಗ ಸೇರಿದಂತೆ ಅನೇಕ ಕಾರಣಗಳಿಗಾಗಿ ₹50 ಲಕ್ಷ ವರೆಗೂ ಸಾಲ ಸೌಲಭ್ಯ ನೀಡುವ ಯೋಜನೆ ಸದ್ಯದಲ್ಲಿಯೇ ಶುರುವಾಗಲಿದೆ. ಜೊತೆಗೆ ವಿಕಲಚೇತನರಿಗೆ ಅಗತ್ಯ ಸಲಕರಣಗಳನ್ನು ಸಹ ಸರ್ಕಾರದಿಂದ ನೀಡಲಾಗುತ್ತಿದ್ದು ಯೋಜನೆ ಬಳಸಿಕೊಳ್ಳಲು ದಾಸ್ ಸೂರ್ಯವಂಶಿ ಮನವಿ ಮಾಡಿದರು.
ಫೋಟೋ ನಂತರ ಕಳುಹಿಸುವೆ..