ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಾಳಲಾರದೆ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೊನೆಗೂ ಸಾಲಗಾರರ ರಕ್ಷಣೆಗೆ ಮುಂದಾಗಿ ಸಹಾಯವಾಣಿ ಕೇಂದ್ರವೊಂದನ್ನು ತೆರೆದಿದೆ.ಮೈಕ್ರೋ ಫೈನಾನ್ಸ್ ಗಳು ಸಾಲ ವಸೂಲಾತಿ ಸಂದರ್ಭದಲ್ಲಿ ಕಿರುಕುಳ ನೀಡಿದರೆ 08232- 224655 ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಎಫ್‌ಐಆರ್ ದಾಖಲು:ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಭೆ ನಡೆಸಿ ಮಾತನಾಡಿ, ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಸಮಾಜದಲ್ಲಿ ಅವಕಾಶವಿಲ್ಲ. ಸಾಲ ಮರುಪಾವತಿ ಮಾಡದಿರುವವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುವುದು, ಮನೆಯ ಮೇಲೆ ಅವಮಾನವಾಗುವ ರೀತಿ ಮನೆ ಅಡಮಾನ ಮಾಡಿಕೊಳ್ಳಲಾಗಿದೆ ಎಂದು ಬರೆಯುವ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸರು ನೇರವಾಗಿ ಸ್ವಯಂ ಹಿತಾಸಕ್ತಿಯಿಂದ ಎಫ್‌ಐಆರ್ ದಾಖಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ನೋಡಲ್ ಅಧಿಕಾರಿಗಳ ನೇಮಕ:ಮೈಕ್ರೋ ಫೈನಾನ್ಸ್ ಬಗ್ಗೆ ಬರುವ ದೂರುಗಳನ್ನು ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ತಾಲೂಕು ಮಟ್ಟದಲ್ಲಿ ಸಹ ತಾಲೂಕು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.
ಸಾಲ ವಸೂಲಾತಿ ಮಾಡಲು ಆರ್‌ಬಿಐ ನಿಯಮಗಳಿವೆ. ನಿಯಮ ಉಲ್ಲಂಘಿಸಿದರೆ ಮೈಕ್ರೋ ಫೈನಾನ್ಸ್ ವಿರುದ್ಧ ಸ್ಥಳೀಯವಾಗಿ ದೂರು ದಾಖಲಿಸುವುದರ ಜೊತೆಗೆ ಕ್ರಮ ಕೈಗೊಳ್ಳುವಂತೆ ಆರ್‌ಬಿಐಗೆ ಪತ್ರ ಬರೆಯಲಾಗುವುದು ಎಂದು ನುಡಿದರು.ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಯವರು ಸಭೆ ನಡೆಸಿ, ಸ್ಥಳೀಯವಾಗಿ ಮೈಕ್ರೋ ಫೈನಾನ್ಸ್ ಹಾಗೂ ಸಾಲ ಪಡೆದವರ ನಡುವೆ ಯಾವುದಾದರೂ ದೂರು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಷರತ್ತುಗಳು ಕನ್ನಡದಲ್ಲಿರಲಿ:ಸಾಲ ನೀಡುವಾಗ ಸಾಲ ಮರುಪಾವತಿ ಸಾಮಥ್ಯದ ಬಗ್ಗೆ ತಿಳಿದುಕೊಳ್ಳದೇ ಸಾಲ ನೀಡುವುದು, ಮೂರು ಅಥವಾ ನಾಲ್ಕು ಮೈಕ್ರೋಫೈನಾನ್ಸ್‌ಗಳು ಒಬ್ಬರಿಗೇ ಸಾಲ ನೀಡುವುದು ತಪ್ಪು. ಮೈಕ್ರೋ ಫೈನಾನ್ಸ್ ಗಳಿಗೆ 2 ಲಕ್ಷ ರು.ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ನೀಡುವ ಸಂದರ್ಭದಲ್ಲಿ ಅರ್ಜಿ ಹಾಗೂ ಷರತ್ತುಗಳು ಕನ್ನಡ ಭಾಷೆಯಲ್ಲಿರಬೇಕು, ಸಾಲ ನೀಡುವ ಸಂದರ್ಭದಲ್ಲಿ ಸಾಲ ಪಡೆಯುವವರಿಗೆ ಸಾಲ ಮರುಪಾವತಿಯ ಷರತ್ತುಗಳನ್ನು ವಿವರಿಸಿ ಅದರ ವಿಡಿಯೋ ಮಾಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದರು.
ಕಾರ್ಯವೈಖರಿ ಬದಲಿಸಿಕೊಳ್ಳಲು ಸೂಚನೆ:ಜಿಲ್ಲಾಡಳಿತ ಈ ಹಿಂದೆ ಎರಡು ಬಾರಿ ಮೈಕ್ರೋ ಫೈನಾನ್ಸ್ ಗಳ ಮುಖ್ಯಸ್ಥರ ಸಭೆ ಕರೆದು ಸಲಹೆಗಳನ್ನು ನೀಡಿತ್ತು. ಆದರೂ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಹಲವಾರು ದೂರುಗಳು ಬರುತ್ತಿದ್ದು, ಮೈಕ್ರೋ ಫೈನಾನ್ಸ್ ಗಳು ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕು ಇಲ್ಲವಾದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಸಿಕ ಪಾವತಿಗೆ ಬದಲಿಸಲು ಸಲಹೆ:ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಅವರು ಮಾತನಾಡಿ, ಪ್ರತಿ ವಾರ ಸಾಲ ವಸೂಲಾತಿ ಮಾಡಿದರೆ ಸಾಲ ಪಡೆದವರಿಗೂ ಸಾಲ ವಾಪಸ್ ನೀಡುವುದು ಕಷ್ಟಕರ. ಇದನ್ನು ಮಾಸಿಕ ನಿಯಮಕ್ಕೆ ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ ಪಿ ಮುರುಳಿ, ಕೃಷ್ಣಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಮುಖ್ಯಸ್ಥರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.