ಸಾರಾಂಶ
ಶಿರಸಿ: ಶಾಸಕ ಭೀಮಣ್ಣ ನಾಯ್ಕ ಸೇರಿದಂತೆ ರಾಜ್ಯದ ೨೨೪ ಶಾಸಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಅನಂತಮೂರ್ತಿ ಹೆಗಡೆ ಮೇಲೆ ಪ್ರಕರಣ ದಾಖಲಿಸುವಂತೆ ನಗರಸಭಾ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಪ್ರದೀಪ ಶೆಟ್ಟಿ ಅವರು ಬುಧವಾರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.ಅನಂತಮೂರ್ತಿ ಹೆಗಡೆ ಹಾಗೂ ಅವರೊಂದಿಗೆ ಇತರರು ಸೇರಿಕೊಂಡು ಶಿರಸಿಯ ಗಣೇಶ ನಗರದಲ್ಲಿರುವ ಜಿಲ್ಲಾ ಪತ್ರಿಕಾ ಭವನದಲ್ಲಿ ಫೆ. ೪ರಂದು ಪತ್ರಿಕಾಗೋಷ್ಠಿ ನಡೆಸಿ, ಶಾಸಕ ಭೀಮಣ್ಣ ನಾಯ್ಕ ಸೇರಿದಂತೆ ರಾಜ್ಯದ 224 ಶಾಸಕರ ವಿರುದ್ಧ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿದ್ದಾರೆ.
ರಾಜ್ಯದ ೨೨೪ ಶಾಸಕರಲ್ಲಿ ಹೆಚ್ಚು ಸುಳ್ಳು ಹೇಳುವ ಶಾಸಕ ಪ್ರಶಸ್ತಿ ಏನಾದರೂ ಇದ್ದರೆ, ಅದನ್ನು ಶಿರಸಿಯ ಶಾಸಕ ಭೀಮಣ್ಣ ನಾಯ್ಕರಿಗೆ ಕೊಡಬೇಕು ಎಂದಿದ್ದಾರೆ. ಎಲ್ಲ ೨೨೪ ಶಾಸಕರು ಸಂವಿಧಾನಿಕ ಅಧಿಕಾರವನ್ನು ಹೊಂದಿದ್ದಾರೆ. ಆದರೂ ಸುಳ್ಳು ಹೇಳುವವರೆಂದು ಆರೋಪ ಮಾಡಿ ಸಮಾಜದಲ್ಲಿ ಅಶಾಂತಿ ಉದ್ಭವಿಸಲು ಪ್ರೇರೇಪಿಸಿದ್ದಾರೆ. ಹೀಗಾಗಿ ಅನಂತಮೂರ್ತಿ ಹೆಗಡೆ ಮೇಲೆ ಹಾಗೂ ಪತ್ರಿಕಾಗೋಷ್ಠಿಯಲ್ಲಿದ್ದ ಇತರರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕರಿಗೆ ದೂರು ನೀಡಿದ್ದಾರೆ.ಶಿರಸಿ ನಗರ ಠಾಣೆ ಪಿಎಸ್‌ಐ ನಾಗಪ್ಪ ಬಿ. ದೂರು ಸ್ವೀಕರಿಸಿದರು. ನಗರಸಭೆ ಸದಸ್ಯ ಖಾದರ್ ಆನವಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗಣೇಶ ದಾವಣಗೆರೆ, ಹುಲೇಕಲ್ ಗ್ರಾಪಂ ಅಧ್ಯಕ್ಷ ಖಾಸಿಂ ಸಾಬ್ ಪ್ರಮುಖರಾದ ಪ್ರಸನ್ನ ಶೆಟ್ಟಿ, ದೀಪಕ ಹೆಗಡೆ ದೊಡ್ಡೂರು, ರಘು ಕಾನಡೆ, ಗೀತಾ ಭೋವಿ, ಸಂತೋಷ ಶೆಟ್ಟಿ, ಜ್ಯೋತಿ ಪಾಟೀಲ್, ಅಬ್ಬಾಸ ತೋನ್ಸೆ ಮತ್ತಿತರರು ಇದ್ದರು.ನರೇಗಾ: ಜಿಲ್ಲೆಗೆ ಅತ್ಯುತ್ತಮ ಗ್ರಾಪಂ, ಕಾಯಕ ಬಂಧು ಪ್ರಶಸ್ತಿ
ಕಾರವಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ 2023- 24ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಾರಣಕ್ಕಾಗಿ ಅತ್ಯುತ್ತಮ ಗ್ರಾಪಂ ಮತ್ತು ಅತ್ಯುತ್ತಮ ಕಾಯಕ ಬಂಧು ಪ್ರಶಸ್ತಿಗಳನ್ನು ಜಿಲ್ಲೆ ತನ್ನದಾಗಿಸಿಕೊಂಡಿದೆ.ಬುಧವಾರ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ನರೇಗಾ ಹಬ್ಬ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಪಾತ್ರವಾದ ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಪಂಗೆ ಹಾಗೂ ಅತ್ಯುತ್ತಮ ಕಾಯಕ ಬಂಧು ಪ್ರಶಸ್ತಿಗೆ ಭಾಜನರಾದ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಪಂ ವ್ಯಾಪ್ತಿಯ ಗಣಪತಿ ಅವರಿಗೆ ಪ್ರಶಸ್ತಿ ನೀಡಿ, ಅಭಿನಂದಿಸಿದರು.
ಜಿಪಂ ಯೋಜನಾ ನಿರ್ದೇಶಕ ಕರೀಂ ಅಸದಿ, ದೇವಳಮಕ್ಕಿ ಗ್ರಾಪಂ ಅಧ್ಯಕ್ಷ ಸಂತೋಷ ಲೇಕಾ ಗೌಡ, ಉಪಾಧ್ಯಕ್ಷೆ ಕೋಮಲಾ ಕೃಷ್ಣನಂದ ದೇಸಾಯಿ, ಪಿಡಿಒ ರಘುನಂದನ ಆರ್. ಮಡಿವಾಳ, ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ, ಕಾರ್ಯದರ್ಶಿ ಸೂರಜ್ ಮಿರಾಶಿ, ಚಿಗಳ್ಳಿ ಗ್ರಾಪಂ ಕಾರ್ಯದರ್ಶಿ ಯಲ್ಲಪ್ಪ ಪಾಟೀಲ್, ತಾಲೂಕು ಐಇಸಿ ಸಂಯೋಜಕಿ ಸೌಂದರ್ಯ ಕುರಕುರಿ, ಕಾಯಕ ಬಂಧು ಗಣಪತಿ ಶಿವಾಜಿ ಜಿವಾಜಿ ಮತ್ತಿತರರು ಇದ್ದರು.