ಮಹಿಳಾ ಸಂಘದ ವಿರುದ್ಧ ದೂರು: ಮುತ್ತಿಗೆ ಹಾಕಿ ಮಹಿಳೆಯರ ಆಕ್ರೋಶ

| Published : Jan 08 2025, 12:16 AM IST

ಮಹಿಳಾ ಸಂಘದ ವಿರುದ್ಧ ದೂರು: ಮುತ್ತಿಗೆ ಹಾಕಿ ಮಹಿಳೆಯರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಚಟುವಟಿಕೆಗಳ ಬಗ್ಗೆ ಅಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಘಗಳ ಮಹಿಳಾ ಸದಸ್ಯೆಯರು ಉಪವಿಭಾಗಾಧಿಕಾರಿ ಹಾಗೂ ಡಿವೈಎಸ್‌ಪಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಚಟುವಟಿಕೆಗಳ ಬಗ್ಗೆ ಅಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂಘಗಳ ಮಹಿಳಾ ಸದಸ್ಯೆಯರು ಉಪವಿಭಾಗಾಧಿಕಾರಿ ಹಾಗೂ ಡಿವೈಎಸ್‌ಪಿಗೆ ಮಂಗಳವಾರ ಮನವಿ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಜಯಂತ ಡಿ.ಎಂಬುವವರ ನೇತೃತ್ವದಲ್ಲಿ ಮಂಜುನಾಥ ಮರಶೆಟ್ಟಿ, ಸುನೀಲ ಹಲಗಿ, ಆನಂದ ಪಟಾತ ಇತರರು ಧರ್ಮಸ್ಥಳ ಸಂಘದವರು ಅಕ್ರಮ ಬಡ್ಡಿ ದಂದೆ ನಿಲ್ಲಿಸಬೇಕೆಂದು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿರುವ ಸುದ್ದಿ ತಿಳಿದ ಸಂಘದ 300ಕ್ಕೂ ಅಧಿಕ ಮಹಿಳೆಯರು ಎಸಿ ಕಚೇರಿ ಎದುರು ಜಮಾವಣೆಗೊಂಡು ಧರ್ಮಸ್ಥಳ ಸಂಘದ ಹೆಸರು ಕೆಡಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಈ ವ್ಯಕ್ತಿಗಳು ಸ್ಥಳೀಯ ಕೆಲವರಿಗೆ ಹಣ ನೀಡಿ ಪ್ರತಿಭಟಿಸಲು ಫುಸಲಾಯಿಸುತ್ತಿದ್ದಾರೆ. ಅಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳನ್ನು ನಾವು ಬಿಡೆವು, ಬಡ ಮಹಿಳೆಯರ ಆರ್ಥಿಕ ಸಬಲತೆಗೆ ನೆರವು ನೀಡುತ್ತಿರುವ ಸಂಘದ ಬಗ್ಗೆ ಅವಹೇಳನ ಮಾಡುವವರ ವಿರುದ್ಧ ಹೋರಾಟಕ್ಕೆ ಇಳಿಯುವುದಾಗಿ ಮಹಿಳೆಯರು ಎಚ್ಚರಿಸಿದ ಮಹಿಳೆಯರು ಪ್ರವಾಸಿ ಮಂದಿರದಲ್ಲಿ ತಂಗಿದ್ದ ಜಯಂತ ಡಿ. ಹಾಗೂ ಇನ್ನುಳಿದವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ತಾಕತ್ತಿದ್ದರೆ ನೀವು ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿ, ಅವಿದ್ಯಾವಂತ ಸ್ವಸಹಾಯ ಸಂಘದ ಮಹಿಳೆಯರಿಗೆ ಇಲ್ಲಸಲ್ಲದ ವಿಚಾರಗಳನ್ನು ಮನಸ್ಸಿನಲ್ಲಿ ಬಿತ್ತಿ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ನಿಮ್ಮ ಸ್ವಾರ್ಥಕ್ಕೆ ಬಡ ಮಹಿಳೆಯರ ಅಶಾಕಿರಣವಾದ ಸಂಘದ ಹೆಸರು ಕೆಡಿಸಲು ಷಡ್ಯಂತ್ರ ಮಾಡುತ್ತಿದ್ದಿರಾ ಹೊರಗೆ ಬನ್ನಿ ಎಂದು ಮಹಿಳೆಯರು ಆಕ್ರೋಶ ಹೊರ ಹಾಕಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಮಹಿಳೆಯರನ್ನು ಶಾಂತಗೊಳಿಸಿದರು. ಪ್ರತಿಭಟನೆ ಕಂಡು ಅಲ್ಲಿದ್ದವರು ಒಬ್ಬೊಬ್ಬರಾಗಿ ಕಾಲ್ಕಿತ್ತರು ಎಂದು ತಿಳಿದು ಬಂದಿದೆ.

ಸಂಘದ ಮಹಿಳೆಯರಾದ ಚಂದ್ರಿಕಾ ಕಳಂಮಕರ, ರತ್ನಾ ಗೋಧಿ, ಶೈಲಾ ಸಂಗನಗೌಡ್ರ, ರಾಜನಬಿ ನಿರಾಬರ, ಹುಸೇನಬಿ ನದಾಫ್‌ ಮಾತನಾಡಿ, ತಾಲೂಕಿನಲ್ಲಿ ಬಡವರ ಕಲ್ಯಾಣಕ್ಕಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು 3085 ಸ್ವಸಹಾಯ ಸಂಘಗಳನ್ನು ರಚಿಸಿ ತರಬೇತಿ ನೀಡಿ, ಸರ್ಕಾರ ಮತ್ತು ಇತರೆ ಸೌಲಭ್ಯಗಳನ್ನು ಪರಿಚಯಿಸಿದ್ದಲ್ಲದೆ ಸಂಘದ ಎಲ್ಲಾ ಸದಸ್ಯರಿಗೆ ಆರ್ಥಿಕ ಸ್ವಾವಲಂಬನೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುವಂತೆ ಮಾಡಿ ಬಡ ಕುಟುಂಬಗಳಿಗೆ ಆಸರೆಯಾಗಿದೆ. ಸ್ವಸಹಾಯ ಸಂಘಗಳ ವ್ಯವಹಾರ ಪಾರರ್ದಕವಾಗಿದೆ. ಕೆಲ ಕಿಡಿಗೇಡಿಗಳು ತಮ್ಮ ಸ್ವಾರ್ಥಕ್ಕಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಆರೋಪ ಮಾಡುತ್ತ ಪಡೆದ ಸಾಲ ಮರಳಿ ಕಟ್ಟಬೇಡಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದ್ದು, ಅಪಪ್ರಚಾರ ಮುಂದುವರಿಸಿದರೆ ಬೀದಿಗಿಳಿದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು. ಗೀರಿಜಾ ದೇವಲತ್ತಿ, ಮಹಾದೇವಿ ಅರಳಿಗಿಡದ, ಸುರೇಖಾ ಹುಲಮನಿ, ನಿರ್ಮಲಾ ಭಜಂತ್ರಿ ಸೇರಿದಂತೆ ನೂರಾರು ಮಹಿಳೆಯರು ಇದ್ದರು.