ಸಾರಾಂಶ
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ನಮಗೆ ಬೆದರಿಕೆ ಹಾಕಿದ್ದಾರೆ. ನಂತರ ಅವರೇ ಹೋಗಿ ಪೊಲೀಸ್ ಠಾಣೆಯಲ್ಲಿ ನಮ್ಮ ವಿರುದ್ಧ ದೂರು ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ನಮಗೆ ಬೆದರಿಕೆ ಹಾಕಿದ್ದಾರೆ. ನಂತರ ಅವರೇ ಹೋಗಿ ಪೊಲೀಸ್ ಠಾಣೆಯಲ್ಲಿ ನಮ್ಮ ವಿರುದ್ಧ ದೂರು ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಆರೋಪಿಸಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಏಪ್ರಿಲ್ 28ರಂದು ಆದರ್ಶನಗರ ಬಳಿ ಇರುವ ಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ಕೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಹಾಗೂ ಬೆಂಬಲಿಗರು ತೆರಳಿದ್ದರು. ಅದೇ ಸಂದರ್ಭದಲ್ಲಿ ನಾನು ನಮ್ಮವರ ಜೊತೆಯಲ್ಲಿ ತೆರಳಿದ್ದೆವು. ಆಗ ಸುನೀಲಗೌಡ ತಮ್ಮ ಕಾರು ಮುಂದೆ ಬಿಟ್ಟಿಲ್ಲ. ಈ ವೇಳೆ ಯಾಕೆ ಎಂದು ಕೇಳಿದ್ದಕ್ಕೆ ನಮ್ಮ ಮೇಲೆಯೇ ಬೆದರಿಕೆ ಹಾಕಿ ನಿಮ್ಮನ್ನು ನೋಡಿಕೊಳ್ತೀನಿ ಎಂದಿದ್ದಾರೆ ಎಂದು ದೂರಿದರು.ಆಗ ನಾನು ಎಲ್ಲಿ ನೋಡ್ಕೋಂತಿ ನೋಡ್ಕೋ ಅಂದಾಗ ಬಬಲೇಶ್ವರದಲ್ಲಿ ನಿನ್ನನ್ನು ನೋಡಿಕೊಳ್ತೀನಿ ಎಂದಿದ್ದಾರೆ. ಹಾಗಾಗಿ ನಾನು ಅಲ್ಲೇನು ನೋಡ್ತಿಯಾ ನಿನ್ನ ಕಾರಿನಲ್ಲಿಯೇ ನಿಮ್ಮ ಮನೆಗೆ ಬರ್ತೀನಿ, ಏನು ನೋಡಿಕೊಳ್ಳುವುದಿದೆ ನೋಡಿಕೋ ಎಂದಾಗ, ಮಧ್ಯ ಪ್ರವೇಶಿಸಿದ ಸುನೀಲಗೌಡ ಪಾಟೀಲ್ ಅವರ ಬೆಂಬಲಿಗರೊಬ್ಬರು ನಮ್ಮದೇ ತಪ್ಪಿದೆ ಎಂದಾಗ ನಾವು ಅಲ್ಲಿಂದ ಸುಮ್ಮನೆ ನಮ್ಮ ಪಾಡಿಗೆ ನಾವು ಬಂದೆವು. ಆದರೆ ಸುನೀಲಗೌಡ ಅವರು ತಮ್ಮ ಕಾರು ಚಾಲಕನಿಂದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ನಮ್ಮ ಬೆಂಬಲಿಗರ ವಿರುದ್ಧ ಕೇಸ್ ದಾಖಲು ಮಾಡಿಸಿದ್ದಾರೆ.
ನಮಗೆ ಜೀವ ಬೆದರಿಕೆ ಹಾಕಿದ್ದು, ಬಳಿಕ ತಾವೇ ನಮ್ಮವರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ ಎಂದರು ಆರೋಪಿಸಿದರು.