ರಸ್ತೆ ಅಗೆದ ಗುತ್ತಿಗೆದಾರ: ಎನ್ನಾರ್‌ ರಮೇಶ್‌ ದೂರು

| Published : May 17 2024, 01:32 AM IST

ರಸ್ತೆ ಅಗೆದ ಗುತ್ತಿಗೆದಾರ: ಎನ್ನಾರ್‌ ರಮೇಶ್‌ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಪದ್ಮನಾಭನಗರದಲ್ಲಿ ಅಡ್ಡಾದಿಡ್ಡಿ ರಸ್ತೆ ಅಗೆತ ಮಾಡಲಾಗಿದ್ದು ಗೇಲ್‌ ಸಂಸ್ಥೆ ವಿರುದ್ಧ ಪಾಲಿಕೆ ಮುಖ್ಯ ಆಯುಕ್ತ ದೂರು ದಾಖಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೂರಾರು ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವೈಟ್‌ ಟಾಪಿಂಗ್‌ ರಸ್ತೆಗಳು ಮತ್ತು ಡಾಂಬರು ರಸ್ತೆಗಳನ್ನು ಅಗೆದು ಹಾಳು ಮಾಡಿರುವ ಗೇಲ್‌ (ಜಿಎಐಎಲ್) ಸಂಸ್ಥೆಯ ಗುತ್ತಿಗೆದಾರರು ಮತ್ತು ಅನುಮತಿ ನೀಡಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದ ಈಚೆಗೆ ಸಾವಿರಾರು ಕೋಟಿ ರು. ವೆಚ್ಚದಲ್ಲಿ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ. ಪ್ರತಿ ಕಿ.ಮೀ. 15ರಿಂದ 18 ಕೋಟಿ ರು. ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ಮಾಡಲಾಗಿದೆ. ಆದರೆ, ಗೇಲ್‌ ಸಂಸ್ಥೆಯ ಪೈಪ್‌ ಅಳವಡಿಸುವ ಉದ್ದೇಶದಿಂದ ಗುತ್ತಿಗೆದಾರ ಜಯಚಂದ್ರ ಎಂಬುವವರು ಬೇಕಾಬಿಟ್ಟಿಯಾಗಿ ಈ ರಸ್ತೆಗಳನ್ನು ಅಗೆದು ಹಾಕಿ ಪಾಲಿಕೆಗೆ ಸಾವಿರಾರು ಕೋಟಿ ರು. ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 17 ಕೋಟಿ ರು. ವೆಚ್ಚದಲ್ಲಿ ಅತ್ತಿಮಬ್ಬೆ ರಸ್ತೆ, ಪುಟ್ಟಲಿಂಗಯ್ಯ ರಸ್ತೆ, ಬಿ.ವಿ.ಕಾರಂತ ರಸ್ತೆ, ಶಾಸ್ತ್ರೀನಗರ 14ನೇ ಅಡ್ಡರಸ್ತೆ ಸೇರಿದಂತೆ ಬಹುತೇಕ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ. ಆದರೆ, ಗುತ್ತಿಗೆದಾರ ಜಯಚಂದ್ರ ರಾತ್ರೋರಾತ್ರಿ ಗೇಲ್‌ ಸಂಸ್ಥೆಯ ಕೊಳವೆಗಳನ್ನು ಅಳವಡಿಸಲು ಈ ರಸ್ತೆಗಳನ್ನು ಅಗೆದು ಪಾಲಿಕೆಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿದ್ದಾರೆ.

ಅನುಮತಿ ನೀಡಿದ್ದು ದುರಂತ:

ಗೇಲ್‌, ಬಿಎಸ್‌ಎನ್ಎಲ್‌, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ಕೆಪಿಟಿಸಿಎಲ್‌, ಓಎಫ್‌ಸಿ ಸಂಸ್ಥೆಗಳು ಸೇರಿದಂತೆ ಯಾವುದೇ ಸಂಸ್ಥೆಗಳಿಗೆ ರಸ್ತೆ ಅಗೆಯಲು ಅನುಮತಿ ನೀಡುವ ಮುನ್ನ ವೈಟ್‌ ಟಾಪಿಂಗ್‌ ಮತ್ತು ಡಾಂಬರೀಕರಣ ಮುಗಿದ 2 ವರ್ಷ ಕಳೆದಿರಬೇಕು ಎಂಬ ನಿಯಮವಿದೆ. ಆದರೂ ಪಾಲಿಕೆ ಅಧಿಕಾರಿಗಳು ಹೊಸದಾಗಿ ವೈಟ್‌ ಟಾಪಿಂಗ್‌ ಆಗಿರುವ ಮತ್ತು ಡಾಂಬರೀಕರಣವಾಗಿರುವ ರಸ್ತೆಗಳನ್ನು ಅಗೆಯಲು ಅನುಮತಿ ನೀಡಿರುವುದು ದುರಂತ ಎಂದು ಕಿಡಿಕಾರಿದ್ದಾರೆ.

ಕಾನೂನುಬಾಹಿರ ಅನುಮತಿ:

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಮೋನೋಟೈಪ್ ವರೆಗಿನ 6.3 ಕಿ. ಮೀ. ಉದ್ದದ ಕೆ.ಆರ್. ರಸ್ತೆಯನ್ನು ಸುಮಾರು 96 ಕೋಟಿ ರು. ವೆಚ್ಚದಲ್ಲಿ ಹಾಗೂ ಕೃಷ್ಣರಾವ್ ಪಾರ್ಕ್ ಜಂಕ್ಷನ್ನಿಂದ ಸಾರಕ್ಕಿ ಜಂಕ್ಷನ್ ವರೆಗಿನ 7.5 ಕಿ. ಮೀ. ಉದ್ದದ ರಸ್ತೆಯನ್ನು ಸುಮಾರು 108 ಕೋಟಿ ರು. ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ರಸ್ತೆಗಳಾಗಿ ಇತ್ತೀಚೆಗೆ ಪರಿವರ್ತಿಸಲಾಗಿದೆ. ಈ ಎರಡೂ ರಸ್ತೆಗಳಲ್ಲಿಯೂ ಸಹ ಗೇಲ್‌ ಸಂಸ್ಥೆ ಸೇರಿದಂತೆ ಇನ್ನಿತರ ಸಂಸ್ಥೆಗಳ ಕಾರ್ಯಗಳಿಗೆ ಪಾಲಿಕೆ ಅಧಿಕಾರಿಗಳು ರಸ್ತೆ ಅಗೆಯಲು ಕಾನೂನುಬಾಹಿರವಾಗಿ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅನುಮತಿ ಪತ್ರ ತಂದು ಕೊಡದ ಗುತ್ತಿಗೆದಾರ:

ಗೇಲ್‌ ಸಂಸ್ಥೆಯ ಕೊಳವೆಗಳ ಅಳವಡಿಕೆಗೆ ರಸ್ತೆ ಅಗೆತಕ್ಕೆ ನೀಡಲಾಗಿದ್ದ ಅನುಮತಿ ಅವಧಿಯು ಈಗಾಗಲೇ ಪೂರ್ಣಗೊಂಡಿದೆ. ಹೊಸದಾಗಿ ಡಾಂಬರೀಕರಣ ಮಾಡಿದ ರಸ್ತೆಗಳ ಅಗೆಯದಂತೆ ಗುತ್ತಿಗೆದಾರ ಜಯಚಂದ್ರಗೆ ದೂರವಾಣಿ ಕರೆ ಮಾಡಿ ಹಲವು ಬಾರಿ ಸ್ಪಷ್ಟವಾಗಿ ತಿಳಿಸಲಾಗಿದೆ. ತಮ್ಮ ಸಂಸ್ಥೆಯ ನೀಡಿರುವ ಅನುಮತಿ ಪತ್ರದ ಪ್ರತಿಯನ್ನು ತಂದುಕೊಡುವಂತೆ ಸೂಚಿಸಿದರೂ ಆತ ತಂದುಕೊಟ್ಟಿಲ್ಲ ಎಂದು ಪಾಲಿಕೆ ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಪದ್ಮನಾಭನಗರ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಸಾವಿತ್ರಿ ಅಕ್ಕಿ ಹೇಳಿದ್ದಾರೆ.

ಸಾರ್ವಜನಿಕರ ತೆರಿಗೆ ಹಣವನ್ನು ವೆಚ್ಚ ಮಾಡಿ ವೈಟ್‌ ಟಾಪಿಂಗ್‌ ಮತ್ತು ಡಾಂಬರೀಕರಣ ಪೂರ್ಣಗೊಳಿಸಿರುವ ರಸ್ತೆಗಳಲ್ಲಿ ಪೂರ್ವಪರ ವಿಚಾರಣೆ ಮಾಡಿದೆ ರಸ್ತೆ ಅಗೆತಕ್ಕೆ ಅನುಮತಿ ನೀಡಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.