ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರ ಪರ ಕೆಲಸ ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಎನ್‌ಡಿಎ ಮಿತ್ರಕೂಟದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರ ಪರ ಕೆಲಸ ಮಾಡಲು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಎನ್‌ಡಿಎ ಮಿತ್ರಕೂಟದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎ.ಪಿ.ರಂಗನಾಥ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಕಾನೂನು ಘಟಕದ ಸಂಚಾಲಕ ವಸಂತ ಕುಮಾರ್, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಮೊದಲಾದ ನಾಯಕರ ನಿಯೋಗವು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಮೂರು ಪುಟಗಳ ದೂರು ನೀಡಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟಣ್ಣ ಇದ್ದಾರೆ. ಈ ಪುಟ್ಟಣ್ಣ ಪರ ಪ್ರಚಾರ ಮಾಡಲು ಜನ ಸಿಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ಡಿಡಿಪಿಯು, ಬಿಇಒ ಹಾಗೂ ಡಿಡಿಪಿಐಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.ಸರ್ಕಾರಿ ಯಂತ್ರದ ನೇರ ದುರುಪಯೋಗ ನಡೆಯುತ್ತಿದೆ. ಚುನಾವಣೆ ಗೆಲ್ಲಬೇಕು ಎನ್ನುವ ಕಾರಣಕ್ಕೆ ಈ ಕಾಂಗ್ರೆಸ್ ಸರ್ಕಾರ ಯಾವ ಹಂತಕ್ಕೆ ಬೇಕಾದರೂ ಹೋಗುತ್ತದೆ ಎಂಬುದಕ್ಕೆ ಇದು ನಿದರ್ಶನ ಆಗಿದೆ. ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು ಈಗಾಗಲೇ ಈ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಸಭೆಗಳನ್ನು ಕೂಡ ನಡೆಸುತ್ತಿದ್ದಾರೆ. ಡಿಡಿಪಿಐ, ಬಿಇಒ ಕಚೇರಿಗೆ ಶಿಕ್ಷಕರನ್ನು ಕರೆಸಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪಾರ್ಟಿಗಳು, ಗಿಫ್ಟ್‌ಗಳು:ಪ್ರಚಾರದ ನೆಪದಲ್ಲಿ ಸಂಜೆ ಪಾರ್ಟಿ, ಲೇಟ್ ನೈಟ್ ಪಾರ್ಟಿಗಳು ನಡೆದಿವೆ. ಈ ಪಾರ್ಟಿಗಳಲ್ಲಿ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಅಂತಯೇ ಈ ಅಧಿಕಾರಿಗಳ ಮೂಲಕ ಮತದಾರರಿಗೆ ಗಿಫ್ಟ್‌ಗಳನ್ನು ಕೊಡಿಸುತ್ತಿದ್ದಾರೆ. ‘ನಿಮ್ಮದೇನಾದರೂ ಡಿಮ್ಯಾಂಡ್ ಇದ್ದರೆ ದಯವಿಟ್ಟು ಹೇಳಿ, ಆದರೆ, ಪುಟ್ಟಣ್ಣ ಅವರಿಗೆ ವೋಟ್ ಹಾಕಬೇಕು’ ಎನ್ನುವ ಕರೆಗಳು ಬರುತ್ತಿವೆ ಎಂದು ಛಲವಾದಿ ನಾರಾಯಣಸ್ವಾಮಿ ಗಮನ ಸೆಳೆಸಿದರು.
ಡಿಡಿಪಿಯು, ಬಿಆರ್‌ಸಿ ಪ್ರಚಾರದಲ್ಲಿ ಭಾಗಿ:ಡಿಡಿಪಿಯು ಉಪ ನಿರ್ದೇಶಕ ನೀಲಕಂಠೇಗೌಡ ಮತ್ತು ಬ್ಲಾಕ್ ರಿಸೋರ್ಸ್ ಕೋ-ಆರ್ಡಿನೇಟರ್ (ಬಿಆರ್‍ಸಿ) ನಾರಾಯಣ ಅವರು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಪುಟ್ಟಣ್ಣ ನಾಮಪತ್ರ ಸಲ್ಲಿಸುವಾಗ ನಾರಾಯಣ ಅವರ ಜತೆಯಲ್ಲೇ ಇದ್ದರು ಎಂದು ದೂರಿದರು.
ಬಿಇಒಗಳ ಚಟುವಟಿಕೆಗಳ ಮೇಲಿನ ನಿಗಾಕ್ಕೆ ವಕೀಲರ ತಂಡ:ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ 17 ಮಂದಿ ಬಿಇಒಗಳು ಇದ್ದಾರೆ. ನಾವು ಒಬ್ಬ ಬಿಇಒ ಹಿಂದೆ 10 ಜನ ವಕೀಲರನ್ನು ನಿಯೋಜಿಸಿದ್ದೇವೆ. ಈ ತಂಡಗಳು ಕ್ಯಾಮರಾದಿಂದ ಈ ಬಿಇಒಗಳ ಚಲನವಲನಗಳನ್ನು ಸೆರೆ ಹಿಡಿಯಲಿದ್ದಾರೆ. ಅವರು ಎಲ್ಲೆಲ್ಲಿಗೆ ಹೋಗುತ್ತಾರೆ? ಏನೇನು ಚಟುವಟಿಕೆ ಮಾಡುತ್ತಾರೆ ಎಂಬುದನ್ನು ಈ ವಕೀಲರ ತಂಡಗಳು ಸೆರೆ ಹಿಡಿದು ನೀಡಲಿದ್ದಾರೆ. ಇದನ್ನು ನಾವು ನ್ಯಾಯಾಲಯಕ್ಕೂ ಒಯ್ಯಲಿದ್ದೇವೆ. ರಾಜ್ಯ ಮತ್ತು ರಾಷ್ಟ್ರೀಯ ಚುನಾವಣಾ ಆಯೋಗಕ್ಕೂ ಇದನ್ನು ತಲುಪಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಕೆಲಸ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು-ಛಲವಾದಿ ನಾರಾಯಣಸ್ವಾಮಿ, ಮೇಲ್ಮನೆ ವಿಪಕ್ಷ ನಾಯಕ
