ತೇಜೋವಧೆ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್, ಚುನಾವಣಾ ಆಯೋಗಕ್ಕೆ ದೂರು

| Published : Apr 22 2024, 02:03 AM IST

ತೇಜೋವಧೆ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್, ಚುನಾವಣಾ ಆಯೋಗಕ್ಕೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರಾದ್ಯಂತ ನನ್ನ ಪರ ಒಲವು ಹೆಚ್ಚುತ್ತಿದ್ದು, ಜನಪ್ರಿಯತೆ ಹೆಚ್ಚಾಗುತ್ತಿರುವುದರಿಂದ ನನ್ನ ತೇಜೋವಧೆ ಮಾಡಲು ಸುಳ್ಳು ವದಂತಿ ಸೃಷ್ಟಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಅಂತಹ ಯಾವುದೇ ತೇಜೋವಧೆ, ವದಂತಿಗಳಿಗೆ ಜನತೆ ಕಿವಿಗೊಡಬಾರದು ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಮನವಿ ದಾವಣಗೆಯಲ್ಲಿ ಮಾಡಿದ್ದಾರೆ.

- ತಪ್ಪು ಸಂದೇಶ ನೀಡುವ ಪೋಸ್ಟರ್‌ಗಳ ವಿರುದ್ಧ ವಿನಯಕುಮಾರ್ ಕಿಡಿ- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರಾದ್ಯಂತ ನನ್ನ ಪರ ಒಲವು ಹೆಚ್ಚುತ್ತಿದ್ದು, ಜನಪ್ರಿಯತೆ ಹೆಚ್ಚಾಗುತ್ತಿರುವುದರಿಂದ ನನ್ನ ತೇಜೋವಧೆ ಮಾಡಲು ಸುಳ್ಳು ವದಂತಿ ಸೃಷ್ಟಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಅಂತಹ ಯಾವುದೇ ತೇಜೋವಧೆ, ವದಂತಿಗಳಿಗೆ ಜನತೆ ಕಿವಿಗೊಡಬಾರದು ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಮನವಿ ಮಾಡಿದರು.

ನನ್ನ ಫೋಟೋ ಎಡಿಟ್ ಮಾಡಿ, ಜನರಿಗೆ ತಪ್ಪು ಸಂದೇಶ ನೀಡುವ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಲು ಹೋಗಿದ್ದಾಗ ಸ್ಥಳದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹ ಇದ್ದರು. ನನ್ನ ವಿರುದ್ಧ ನಡೆದಿರುವ ತೇಜೋವಧೆ ಕುರಿತಂತೆ ಸೈಬರ್ ಕ್ರೈಂ ಪೋಲೀಸ್‌ಗೆ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಯಾತ್ರೆ ಕೈಗೊಂಡಾಗಿನಿಂದಲೂ ನನ್ನ ತೇಜೋವಧೆ ನಡೆಯುತ್ತಿದೆ. ಅಭಿಮಾನಿಗಳು, ಹಿತೈಷಿಗಳು, ಸ್ವಾಭಿಮಾನದ ಬೆಂಬಲಿಗರು ಇಂತಹ ತಂತ್ರಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳಿಗೆ ನನ್ನ ಸ್ಪರ್ಧೆಯಿಂದ ಭಯ ಉಂಟಾಗಿರುವುದಂತೂ ನಿಜ ಎಂದಿದ್ದಾರೆ.

ದಾವಣಗೆರೆ ಡಿಸಿ ಕಚೇರಿಯಲ್ಲಿ ಶುಕ್ರವಾರ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವರಾದ ಜಿ.ಕರುಣಾಕರ ರೆಡ್ಡಿ, ಎಸ್.ಎ.ರವೀಂದ್ರನಾಥ ನಾಮಪತ್ರ ಸಲ್ಲಿಸಲೆಂದು ಬಂದಿದ್ದರು. ನಾನೂ ನಾಮಪತ್ರ ಸಲ್ಲಿಸಲು ತೆರಳಿದ್ದ ವೇಳೆ ಸಹಜವಾಗಿಯೇ ಕುಶಲೋಪರಿ ವಿಚಾರಿಸಿದರು. ಅದೊಂದು ಆಕಸ್ಮಿಕ ಭೇಟಿ. ಆದರೆ, ಅದಕ್ಕೆ ಒಳಒಪ್ಪಂದ ಕಥೆ ಕಟ್ಟುವುದು ಸರಿಯೂ ಇಲ್ಲ. ಅದೊಂದು ಫೋಟೋ ವೈರಲ್ ಆಗಿದೆ. ಅದರಲ್ಲೂ ಮುಸ್ಲಿಂ ಬಾಂಧವರು ನನ್ನ ಜೊತೆಗೆ ಓಡಾಡುವ ಅಭಿಮಾನಿಗಳು, ಬೆಂಬಲಿಗರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಡಿಸಿ ಕಚೇರಿಯಲ್ಲಿ ಯಾರೂ ಡೀಲ್ ಮಾಡಿಕೊಳ್ಳಲಾಗುವುದಿಲ್ಲ. ಸಂಸದ ತೇಜಸ್ವಿ ಸೂರ್ಯ ಬಿಜೆಪಿಗೆ ಸೇರುವಂತೆ ಆಹ್ವಾನಿಸಿದಾಗ, ಕೋಮುವಾದಿ ಪಕ್ಷಕ್ಕೆ ಬರಲ್ಲ ಅಂತಲೇ ಟ್ವೀಟ್ ಮಾಡಿದ್ದೆ. ಎಲ್ಲರಿಗೂ ಗೊತ್ತಿರುವ ವಿಚಾರವಿದು ಎಂದೂ ಹೇಳಿದ್ದಾರೆ.

- - - ಕೋಟಿ ಕೊಟ್ಟರೂ ಸಿಗದ ಪ್ರಚಾರ ಕೊಟ್ಟಿದ್ದಾರೆ! ಕೋಟಿ ರು. ಕೊಟ್ಟರೂ ಇಷ್ಟೊಂದು ಜನಪ್ರಿಯತೆ ಸಿಗುವುದಿಲ್ಲ. ಉಚಿತವಾಗಿ ಪ್ರಚಾರ ಕೊಟ್ಟಿದ್ದೀರಿ. ನಾಮಪತ್ರ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಸ್ಪರ್ಧೆ ಮಾಡಿದ್ದೇನೆ, ಗೆಲ್ಲುತ್ತೇನೆ. ಜನಬೆಂಬಲ, ಜನಾದೇಶ ನನ್ನ ಪರವಿದೆ

- ಜಿ.ಬಿ.ವಿನಯಕುಮಾರ, ಪಕ್ಷೇತರ ಅಭ್ಯರ್ಥಿ

- - - -21ಕೆಡಿವಿಜಿ5, 6:

ಜಿ.ಬಿ.ವಿನಯಕುಮಾರ