ಮಾನವ ಹಕ್ಕು ಆಯೋಗಕ್ಕೆ ದೂರು: ಜಿಲ್ಲಾಮಟ್ಟದಲ್ಲಿಯೇ ವಿಚಾರಣೆ

| Published : Jun 28 2024, 12:49 AM IST

ಮಾನವ ಹಕ್ಕು ಆಯೋಗಕ್ಕೆ ದೂರು: ಜಿಲ್ಲಾಮಟ್ಟದಲ್ಲಿಯೇ ವಿಚಾರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಕಳೆದ 6 ತಿಂಗಳಲ್ಲಿ 5021 ಪ್ರಕರಣಗಳನ್ನು ಇತ್ಯರ್ಥಪಡಿಸಿದೆ ಎಂದು ಆಯೋಗದ ರಾಜ್ಯಾಧ್ಯಕ್ಷ (ಪ್ರಭಾರಿ) ಡಾ. ಶ್ಯಾಮ್ ಭಟ್‌ ಹೇಳಿದರು.ಜಿಲ್ಲಾ ಪ್ರವಾಸದ ಹಿನ್ನಲೆಯಲ್ಲಿ ಗುರುವಾರ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆ, ವಿದ್ಯಾರ್ಥಿನಿಲಯ, ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2023ರ ನವೆಂಬರ್‌ ಮಾಹೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೊಸ ಸಮಿತಿ ರಚನೆಯಾಗಿದ್ದು, ಆಗ ಆಯೋಗದ ಮುಂದೆ 8054 ಪ್ರಕರಣಗಳು ಇದ್ದವು. ಕಳೆದ 6 ತಿಂಗಳಲ್ಲಿ 5021 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನು 3033 ಕೇಸ್‌ಗಳು ಬಾಕಿ ಇವೆ.

ರಾಜ್ಯದಲ್ಲಿ ಸದ್ಯ 3033 ಕೇಸ್‌ಗಳು ಪೆಂಡಿಂಗ್‌ । 6 ತಿಂಗಳಲ್ಲಿ 5021 ಪ್ರಕರಣಗಳು ಇತ್ಯರ್ಥ। ಸುದ್ದಿಗೋಷ್ಠಿಯಲ್ಲಿ ಆಯೋಗದ ರಾಜ್ಯಾಧ್ಯಕ್ಷ ಡಾ. ಶ್ಯಾಮ್‌ ಭಟ್‌ ಮಾಹಿತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಕಳೆದ 6 ತಿಂಗಳಲ್ಲಿ 5021 ಪ್ರಕರಣಗಳನ್ನು ಇತ್ಯರ್ಥಪಡಿಸಿದೆ ಎಂದು ಆಯೋಗದ ರಾಜ್ಯಾಧ್ಯಕ್ಷ (ಪ್ರಭಾರಿ) ಡಾ. ಶ್ಯಾಮ್ ಭಟ್‌ ಹೇಳಿದರು.

ಜಿಲ್ಲಾ ಪ್ರವಾಸದ ಹಿನ್ನಲೆಯಲ್ಲಿ ಗುರುವಾರ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆ, ವಿದ್ಯಾರ್ಥಿನಿಲಯ, ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2023ರ ನವೆಂಬರ್‌ ಮಾಹೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೊಸ ಸಮಿತಿ ರಚನೆಯಾಗಿದ್ದು, ಆಗ ಆಯೋಗದ ಮುಂದೆ 8054 ಪ್ರಕರಣಗಳು ಇದ್ದವು. ಕಳೆದ 6 ತಿಂಗಳಲ್ಲಿ 5021 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನು 3033 ಕೇಸ್‌ಗಳು ಬಾಕಿ ಇವೆ. ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲಾ ಕೇಂದ್ರದಲ್ಲಿ ದೂರುದಾರರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆಯೋಗ ಕಾರ್ಯಕ್ರಮ ರೂಪಿಸಿದೆ. ಈವರೆಗೆ 8 ಜಿಲ್ಲೆಗಳಿಗೆ ಭೇಟಿ ನೀಡಲಾಗಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದೇವೆ ಎಂದು ಹೇಳಿದರು.

ಆಯೋಗಕ್ಕೆ ದೂರು ಸಲ್ಲಿಸಿದವರು ಹಾಗೂ ಸಂಬಂಧಪಟ್ಟ ಇಲಾಖೆಯವರು ಬೆಂಗಳೂರಿಗೆ ಬಂದು ಹೋಗಲು ತೊಂದರೆ ಯಾಗಲಿದೆ. ಜತೆಗೆ ಆರ್ಥಿಕವಾಗಿ ಹೊರೆಯಾಗಲಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 55 ಪ್ರಕರಣಗಳು ಇತ್ಯರ್ಥವಾಗಬೇಕಾಗಿದ್ದು, ಈ ಪೈಕಿ 28 ಕೇಸ್‌ಗಳಲ್ಲಿ ವರದಿ ಬಂದಿದೆ. 27 ಪ್ರಕರಣ ಇತ್ಯರ್ಥವಾಗಬೇಕಾಗಿದೆ. ವಿಚಾರಣೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಅಗತ್ಯ ಬಿದ್ದರೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.

ಜನರ ಹಕ್ಕಿಗೆ ಯಾವುದೇ ರೀತಿಯಲ್ಲಾದರೂ ತೊಂದರೆಯಾದಲ್ಲಿ ಆಯೋಗ ದೂರು ಸ್ವೀಕರಿಸಲಿದೆ. ಕೆಲವು ಪ್ರಕರಣ ಗಳಲ್ಲಿ ಸೋಮೋಟೋ ಕೇಸ್‌ಗಳನ್ನು ದಾಖಲಿಸಿಕೊಂಡು ಇಲಾಖೆಗಳ ಗಮನ ಸೆಳೆಯಲಾಗಿದೆ. ಆಯೋಗಕ್ಕೆ ಪ್ರತಿದಿನ 30-40 ದೂರುಗಳು ಬರುತ್ತಿವೆ. ಹಾಗಾಗಿ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ವೇಗದಲ್ಲಿ ಇತ್ಯರ್ಥಪಡಿಸುವ ಕೆಲಸ ಸಹ ನಡೆಯುತ್ತಿದೆ ಎಂದರು.

--- ಬಾಕ್ಸ್-- ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ: ಪರಿಶೀಲನೆ

ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಲಾಗಿದ್ದು, ಕೆಲವೆಡೆ ನ್ಯೂನ್ಯತೆಗಳು ಕಂಡು ಬಂದಿತು. ಸರ್ವರ್‌ ತೊಂದರೆ ಯಿಂದಾಗಿ ಓಪಿಡಿಯಲ್ಲಿ ಜನರು ಚೀಟಿ ಪಡೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಆ ಭಾಗದಲ್ಲಿ ಸ್ಥಳದ ಅಭಾವ ಕಂಡು ಬರುತ್ತಿತ್ತು. ಜತೆಗೆ ಹೆಚ್ಚುವರಿಯಾಗಿ ಕಂಪ್ಯೂಟರ್ ಆಪರೇಟರ್‌ ಹಾಕಲು ಜಿಲ್ಲಾ ಸರ್ಜನ್‌ ಒಪ್ಪಿದ್ದಾರೆ ಎಂದು ಹೇಳಿದರು.

ಶೌಚಾಲಯದ ನಿರ್ವಹಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಶುಚಿತ್ವ ಕಂಡು ಬರಲಿಲ್ಲ, ಆಸ್ಪತ್ರೆಯಲ್ಲಿ ರೆಡಿಯಾಲಜಿಸ್ಟ್‌ ಕಳೆದ ಒಂದು ವರ್ಷದಿಂದ ಇಲ್ಲ. ನರ್ಸ್‌ ಮತ್ತು ಪ್ಯಾರ ಮೆಡಿಕಲ್‌ ಸಿಬ್ಬಂದಿ ಸಂಖ್ಯೆಯಲ್ಲೂ ಕೊರತೆ ಕಂಡು ಬಂದಿತು ಎಂದರು.

ಜಿಲ್ಲಾ ಕಾರಾಗೃಹದ ನಿರ್ವಹಣೆ ಉತ್ತಮವಾಗಿದೆ. ಕ್ಲಿನಿಂಗ್‌ ಮತ್ತು ಗಾರ್ಡನ್‌ ಚೆನ್ನಾಗಿದೆ. ಅನಕ್ಷರಸ್ಥ ಕೈದಿಗಳಿಗೆ ಅಕ್ಷರಾ ಭ್ಯಾಸ ಮಾಡಿಸಲು ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಇದೆಲ್ಲಾ ಪ್ರಶಂಸನೀಯವಾದುದು ಎಂದು ಹೇಳಿದರು.

ಇಲ್ಲಿನ ಬಂಧಿಖಾನೆಯಲ್ಲಿ 155 ಮಂದಿ ಖೈದಿಗಳು ಇರಲು ಮಾತ್ರ ಅವಕಾಶವಿದೆ. ಆದರೆ, ಇದೀಗ 178 ಮಂದಿ ಖೈದಿಗಳು ಇದ್ದಾರೆ. ಇವರ ಪೈಕಿ ಸುಮಾರು ಶೇ. 30 ಮಂದಿಗೆ ನ್ಯಾಯಾಲಯದಲ್ಲಿ ಅವರ ಪರ ವಾದ ಮಾಡಲು ವಕೀಲರೇ ಇಲ್ಲ. ಅಂತಹವರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರನ್ನು ಒದಗಿಸಲಾಗಿದೆ. ಜೈಲಿನಲ್ಲಿರುವ ಖೈದಿಗಳ ಪೈಕಿ ಶೇ. 25 ರಷ್ಟು ಮಂದಿ ಪೋಕ್ಸೋ ಕೇಸ್‌ನಲ್ಲಿ ಬಂಧಿತರಾದವರು ಇದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಯೋಗದ ಕಾರ್ಯದರ್ಶಿ ಸುರೇಶ್‌ ಒಂಟಿಗೋಡು, ದಿನೇಶ್‌ ಸಂಪತ್‌ರಾಜ್ ಇದ್ದರು. 27 ಕೆಸಿಕೆಎಂ 5ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ. ಶ್ಯಾಮ್‌ ಭಟ್‌, ಕಾರ್ಯದರ್ಶಿ ಸುರೇಶ್ ಒಂಟಿಗೋಡು, ದಿನೇಶ್‌ ಸಂಪತ್‌ರಾಜ್‌ ಗುರುವಾರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದರು.