ಹಡಗಲಿ ಪುರಸಭೆ ಸದಸ್ಯರನ್ನು ಹುಡುಕಿ ಕೊಡಿ ಎಂದು ಠಾಣೆಗೆ ದೂರು

| Published : Jan 26 2025, 01:33 AM IST

ಹಡಗಲಿ ಪುರಸಭೆ ಸದಸ್ಯರನ್ನು ಹುಡುಕಿ ಕೊಡಿ ಎಂದು ಠಾಣೆಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷದ ಬಿ ಫಾರಂ, ಚಿಹ್ನೆಯಿಂದ ಚುನಾಯಿತರಾದ ಪುರಸಭಾ ಸದಸ್ಯರು ನಾಪತ್ತೆಯಾಗಿದ್ದಾರೆ.

ಹೂವಿನಹಡಗಲಿ: ಕಾಂಗ್ರೆಸ್ ಪಕ್ಷದ ಬಿ ಫಾರಂ, ಚಿಹ್ನೆಯಿಂದ ಚುನಾಯಿತರಾದ ಪುರಸಭಾ ಸದಸ್ಯರು ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡುವಂತೆ ಹಡಗಲಿ, ಇಟ್ಟಗಿ ಬ್ಲಾಕ್‌ ಅಧ್ಯಕ್ಷರು ಹೂವಿನಹಡಗಲಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಜ.30ರಂದು ಇಲ್ಲಿನ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಕಾಂಗ್ರೆಸ್ ಪಕ್ಷದ ಬಿ ಫಾರಂ ಮತ್ತು ಚಿಹ್ನೆಯ ಮೂಲಕ ವಿಜೇತರಾಗಿರುವ ಪುರಸಭೆಯ ಸದಸ್ಯರು ಕಾಣೆಯಾಗಿದ್ದಾರೆ. ಅವರನ್ನು ಕೂಡಲೇ ಹುಡುಕಿಕೊಡುವಂತೆ ಹಡಗಲಿ ಪಿಎಸ್‌ಐ ವಿಜಯಕೃಷ್ಣ ಅವರಿಗೆ ದೂರು ಸಲ್ಲಿಸಿದ್ದಾರೆ.

ಪುರಸಭೆಯ ಸದಸ್ಯರಾದ ಐಗೋಳ್ ಸುರೇಶ್, ಚಂದ್ರ ನಾಯ್ಕ, ಸರ್ಜಪ್ಪನವರ ಶಫಿ, ಗಂಟಿ ಜಮಾಲಿಬಿ, ಅಂಗಡಿ ವಿಶಾಲಾಕ್ಷಮ್ಮ, ಅರಣಿ ರಫಿ ಅವರನ್ನು ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಸಂಬಂಧವಾಗಿ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಮನೆಯಲ್ಲಿಯೂ ಇಲ್ಲ. ಈ ಬಗ್ಗೆ ಮನೆಯವರು ಕೂಡ ಸ್ಪಷ್ಟ ಮಾಹಿತಿ ತಿಳಿಸುತ್ತಿಲ್ಲ. ಇವರು ತಾವಾಗಿಯೇ ಹೋಗಿದ್ದಾರೋ? ಅಥವಾ ಯಾರಾದರೂ ಕರೆದುಕೊಂಡು ಹೋಗಿದ್ದಾರೋ? ಎನ್ನುವ ಬಗ್ಗೆ ಮಾಹಿತಿ ಇಲ್ಲ. ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಲು ಇವರು ಪಾಲ್ಗೊಳ್ಳುವುದು ಅತ್ಯವಶ್ಯಕವಾಗಿದೆ. ಚುನಾವಣಾ ಪೂರ್ವದಲ್ಲಿ ಈ ಪುರಸಭಾ ಸದಸ್ಯರನ್ನು ಪತ್ತೆ ಹಚ್ಚಿಕೊಡಬೇಕೆಂದು ದೂರು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಹಡಗಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಇಟ್ಟಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಹನುಮಂತಪ್ಪ, ಮಾಜಿ ಶಾಸಕರ ಪುತ್ರ ಪಿ.ಟಿ. ಭರತ್‌ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.