ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಗಳಿಗೆ ದೂರು ನೀಡುವ ಜೊತೆಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಹೇಳಿದ್ದಾರೆ.

- ಸ್ಟ್ರಾಂಗ್ ರೂಂ ಬೀಗ ತೆಗೆಯದೇ ಒಡೆದಿದ್ದು ಅಕ್ರಮದ ವಾಸನೆ: ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಗಳಿಗೆ ದೂರು ನೀಡುವ ಜೊತೆಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರದ ಮತ ಎಣಿಕೆ ಕೇಂದ್ರವಾದ ಡಿಆರ್‌ಆರ್ ಶಾಲೆಯ ಸ್ಟ್ರಾಂಗ್ ರೂಂಗಳ ಬಾಗಿಲುಗಳ ಬೀಗ ತೆಗೆಯುವ ಬದಲಿಗೆ, ಬಾಗಿಲುಗಳಿಗೆ ಅಳ‍ವಡಿಸಿದ್ದ ಚಿಲಕಗಳನ್ನೇ ಒಡೆದಿದ್ದಾರೆ. ಇದರಿಂದಲೇ ಅಲ್ಲಿ ಅಕ್ರಮದ ವಾಸನೆ ಬಂದಿದೆ ಎಂದು ದೂರಿದರು.

ಚುನಾವಣಾಧಿಕಾರಿ ಬೀಗ ಮರೆತು ಬರುತ್ತಾರೆಂದರೆ ಅಲ್ಲೇನೋ ನಡೆದಿದೆಯೆಂದೇ ಅರ್ಥ. ಜವಾಬ್ದಾರಿಯುತ ಚುನಾವಣಾಧಿಕಾರಿಗಳು ಮೋಸ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ರಾಜ್ಯ, ಕೇಂದ್ರ ಚುನಾವಣಾ ಆಯೋಗಗಳಿಗೆ ದೂರು ನೀಡುವ ಜೊತೆಗೆ ನ್ಯಾಯಾಲಯದಲ್ಲೂ ಕಾನೂನು ಹೋರಾಟ ನಡೆಸುವೆ ಎಂದು ಎಚ್ಚರಿಸಿದರು.

ಸ್ಟ್ರಾಂಗ್ ರೂಂ ಬೀಗಗಳನ್ನೇ ಮರೆತು ಬಂದ ಅಧಿಕಾರಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು. ಅಂತಹ ಅಧಿಕಾರಿಗಳನ್ನು ಸೇವೆಯಿಂದಲೇ ವಜಾ ಮಾಡಬೇಕು. ಮೇಲ್ನೋಟಕ್ಕೆ ಸ್ಟ್ರಾಂಗ್ ರೂಂನ ಬಾಗಿಲು ಒಡೆದಿರುವುದರಲ್ಲಿ ಷಡ್ಯಂತ್ರ ನಡೆದಿದೆಯೇನೋ ಅನಿಸುತ್ತಿದೆ. ಇಡೀ ರಾಜ್ಯ ಸರ್ಕಾರವೇ ದಕ್ಷಿಣ ಕ್ಷೇತ್ರಕ್ಕೆ ಬಂದು, ಚುನಾವಣೆ ನಡೆಸಿದೆ ಎಂದು ಅವರು ದೂರಿದರು.

ನಮ್ಮ ಬಿಜೆಪಿ ಕಾರ್ಯಕರ್ತರು ಎದೆಗುಂದುವುದು ಬೇಡ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಸಾಧಿಸಲಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ತಮಗೆ ಮತ ನೀಡಿದ ಬೆಂಬಲಿಸಿದ ಪ್ರತಿಯೊಬ್ಬ ಮತದಾರರಿಗೂ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಪಕ್ಷ, ನನ್ನ ಪರವಾಗಿ ಕೆಲಸ ಮಾಡಿದ ಎಲ್ಲ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು, ಸ್ನೇಹಿತರು, ಎಲ್ಲ ಸಮುದಾಯಗಳಿಗೂ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಹೇಳಿದರು.

ಆಗರ್ಭ ಶ್ರೀಮಂತರ ಮಧ್ಯೆ ಬಡವನಿಗೆ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿದ್ದಾರೆ. ಮತದಾರರ ಆಶೀರ್ವಾದವನ್ನು ಒಪ್ಪಿಕೊಳ್ಳಬೇಕು. ಬಡವನ ಮಗ ಕೆಲಸ ಮಾಡುವುದು ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲವೆಂದು ಕಾಣುತ್ತದೆ. ಕಳೆದ 20 ವರ್ಷಗಳಿಂದಲೂ ಹೀಗೆಯೇ ಇದೆ. ಮುಂದೆ ಇನ್ನೂ 30 ವರ್ಷ ಹೀಗೆಯೇ ಇರಬೇಕೆಂಬುದಾಗಿ ಬಯಸಿದ್ದಾರೆಂದು ಕಾಣುತ್ತದೆ. ಮತ್ತೆ ಮತದಾರರ ಆಶೀರ್ವಾದದಿಂದ ಹೋರಾಟ ನಡೆಸಿ, ಗೆಲ್ಲುತ್ತೇನೆಂಬ ವಿಶ್ವಾಸವಿದೆ ಎಂದು ತಿಳಿಸಿದರು.

ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ಸಿನ ಬಗ್ಗೆ ಸಾಕಷ್ಟು ಅಸಮಾಧಾನ ಹೊಂದಿತ್ತು. ಈ ಹಿನ್ನೆಲೆ ಮುಸ್ಲಿಮರು ಎಸ್‌ಡಿಪಿಐಗೆ ಮತದಾನ ಮಾಡಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾದಿಯಾಗಿ ಇಡೀ ರಾಜ್ಯ ಸರ್ಕಾರದ ಸಂಪುಟ ಸದಸ್ಯರು, ಮುಖಂಡರೆಲ್ಲಾ ಬಂದು ದಕ್ಷಿಣ ಕ್ಷೇತ್ರದಲ್ಲಿ ಕುಳಿತರೂ ಇಲ್ಲಿ ಕೇವಲ 4800 ಮತಗಳ ಅಂತರದಲ್ಲಿ ಮಾತ್ರ ಗೆದ್ದಿದ್ದಾರೆ. ಸಾವಿರಾರು ಕೋಟಿ ರು. ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ನಮ್ಮೆಲ್ಲಾ ಬಿಜೆಪಿ ಕಾರ್ಯಕರ್ತರು, ಮುಖಂಡರು ಅತ್ಯಂತ ಹುಮ್ಮಸ್ಸಿನಿಂದ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರನಿಗೂ ನಾನು ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತೇನೆ. ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಗಬೇಕೆಂದುಕೊಂಡಿದ್ದ ಎಲ್ಲರೂ ತಾವೇ ಚುನಾವಣೆಗೆ ಸ್ಪರ್ಧಿಸಿದಂತೆ ನನ್ನ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು, ಸಹಕಾರ ಮಾಡಿದ್ದಾರೆ. ನನಗೆ ಈ ಸಲ ಹಣೆಬರಹದಲ್ಲಿ ಗೆಲವು ಇರಲಿಲ್ಲವೆಂದು ತಿಳಿದುಕೊಳ್ಳಬೇಕಷ್ಟೇ. ದಾವಣಗೆರೆ ದಕ್ಷಿಣದಲ್ಲಿ ಮುಂದಿನ ಚುನಾವಣೆಯಲ್ಲಿ ಖಂಡಿತಾ ಕಮಲವನ್ನು ಅರಳಿಸೋಣ ಎಂದು ಪರಾಜಿತ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಆತ್ಮಸ್ಥೈರ್ಯ ತುಂಬಿದರು.

- - -