ನಂಜನಗೂಡು ದೇಗುಲದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರು

| Published : Nov 22 2025, 01:15 AM IST

ನಂಜನಗೂಡು ದೇಗುಲದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಮಳಿಗೆಗಳನ್ನು ಬಾಡಿಗೆಗೆ ಪಡೆದ ವ್ಯಾಪಾರಿಗಳು ತಮ್ಮ ವ್ಯಾಪ್ತಿ ಮೀರಿ ಮಳಿಗೆಯ ಹೊರಗೆ ವಸ್ತುಗಳನ್ನು ಇಟ್ಟುಕೊಂಡು ಭಕ್ತರ ಓಡಾಟಕ್ಕೆ ತೊಂದರೆ ಕೊಡುತ್ತಿದ್ದಾರೆ, ದೇವಾಲಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳಿವೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಪಟ್ಟಣದ ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಮಳಿಗೆಗಳನ್ನು ಬಾಡಿಗೆಗೆ ಪಡೆದ ವ್ಯಾಪಾರಿಗಳು ತಮ್ಮ ವ್ಯಾಪ್ತಿ ಮೀರಿ ಮಳಿಗೆಯ ಹೊರಗೆ ವಸ್ತುಗಳನ್ನು ಇಟ್ಟುಕೊಂಡು ಭಕ್ತರ ಓಡಾಟಕ್ಕೆ ತೊಂದರೆ ಕೊಡುತ್ತಿದ್ದಾರೆ, ದೇವಾಲಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳಿವೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ದೇವಾಲಯದ ಇಒ ಜಗದೀಶ್ ಕುಮಾರ್ ಅವರನ್ನು ತರಾಟೆ ತೆಗೆದುಕೊಂಡರು.

ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಬಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ಬಾರಿ ಸಭೆಯಲ್ಲಿ ನಿಮಗೆ ಒಳ್ಳೆ ಮಾತಲ್ಲಿ ಹೇಳಿ ಸಾಕಾಗಿದೆ, ನಿಮಗೆ ಯಾವ ಭಾಷೆಯಲ್ಲಿ ಹೇಳಬೇಕು, ನಿಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಹೇಳಿ ವ್ಯವಸ್ಥೆ ಮಾಡೋಣ ಎಂದು ಶಾಸಕರು ದೇವಾಲಯದ ಇಒ ಗೆ ವ್ಯವಸ್ಥೆ ಸರಿಪಡಿಸುವಂತೆ ಎಚ್ಚರಿಕೆ ನೀಡಿದರು.

ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ದೇವಾಲಯದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಭಕ್ತರು ಟ್ವಿಟ್ಟರ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಇದರಿಂದ ಜಿಲ್ಲೆಗೆ, ನಮಗೆ ಅವಮಾನ, ಪಾರ್ಕಿಂಗ್ ವ್ಯವಸ್ಥೆ, ನದಿಯ ಬಳಿ ರಕ್ಷಣೆಗೆ ಸಿಬ್ಬಂದಿ ನೇಮಿಸಿ, ಅಕ್ರಮವನ್ನು ತಡೆಗಟ್ಟಿ ಎಂದು ಹರಿಹಾಯ್ದರು.

ಶ್ರೀಕಂಠೇಶ್ವರ ದೇವಾಲಯದ ವಿಐಪಿ ವಸತಿಗೃಹ ದುರಸ್ತಿ ನಡೆಸಲಾಗಿದೆ, ಪಿಠೋಪಕರಣಗಳ ವ್ಯವಸ್ಥೆ ಮಾಡಿ, ದೇವಾಲಯದ ಬಳಿ ಗೋಶಾಲೆ ನಿರ್ಮಿಸಬೇಕು, ತಾಲೂಕಿನ ಕಂತೆ ಮಹದೇಶ್ವರ ಬೆಟ್ಟಕ್ಕೆ ರಸ್ತೆ ನಿರ್ಮಿಸಲು ಮರಗಳನ್ನು ತೆರವುಗೊಳಿಸಿ, ಬೆಟ್ಟದ 1.7 ಗುಂಟೆ ಜಾಗದಲ್ಲಿ ಭಕ್ತರ ಅನುಕೂಲಕ್ಕಾಗಿ ಕಟ್ಟಡ ನಿರ್ಮಿಸಲು ಕ್ರಮವಹಿಸಬೇಕು ಎಂದು ದರ್ಶನ್ ಧ್ರುವನಾರಾಯಣ ತಾಕೀತು ಮಾಡಿದರು,

ಪಟ್ಟಣದ ನ್ಯಾಯಬೆಲೆ ಅಂಗಡಿಗಳಲ್ಲಿ ಜನರಿಗೆ ಸರಿಯಾಗಿ ಪಡಿತರ ವಿತರಣೆ ಮಾಡದಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿವೆ, ಪಡಿತರ ಅಕ್ಕಿ ಕಳ್ಳಸಾಗಣೆದಾರರ ಮೇಲೆ ಕ್ರಿಮಿನಲ್ ಮೆಕದ್ದಮೆ ದಾಖಲಿಸಿ ಎಂದು ಶಾಸಕರು ಆಹಾರ ಇಲಾಖೆ ಶಿರಸ್ತೆದಾರ್ ಅವರಿಗೆ ಸೂಚನೆ ನೀಡಿದರು.

ಶಾಸಕ ಯತೀಂದ್ರ ಸಿದ್ದರಾಮಯ್ಯ ತಾಲೂಕಿನಲ್ಲಿ ಮಳೆ ಹಾನಿಗೊಳಗಾದ 52 ಮನೆಗಳಿಗೆ ವಿಳಂಬ ಮಾಡದೆ ಪರಿಹಾರ ವಿತರಿಸಿ,ಶೇ 60 ಕ್ಕಿಂತ ಮನೆ ಹಾನಿಯಾಗಿದ್ದರೆ ಗರಿಷ್ಟ ಪರಿಹಾರ ನೀಡಿ, ಮನೆ ಕಳೆದುಕೊಂಡವಿರಿಗೆ ನೆರವಾಗಿ, ತಾಲೂಕಿನ ವರುಣ ಕ್ಷೇತ್ರದ ಭಾಗದ 14 ಗ್ರಾಮಗಳಲ್ಲಿ ಸ್ಮಶಾನವಿಲ್ಲ, ಪ್ರತಿ ಗ್ರಾಮಗಳಲ್ಲಿ ಸ್ಮಶಾನದ ವ್ಯವಸ್ಥೆ ಇರಬೇಕು, ಸ್ಮಶಾನವಿಲ್ಲದ ಕಡೆ ಜಾಗ ಗುರ್ತಿಸಿ, ಕೆರೆ ಹಾಗೂ ಸ್ಮಶಾನ ಒತ್ತುವರಿಯನ್ನು ಕಾಲಮಿತಿಯಲ್ಲಿ ತೆರವುಗೊಳಿಸಿ ಎಂದು ತಹಸೀಲ್ದಾರ್ ಗೆ ಸೂಚಿಸಿದರು.

ತಾಲೂಕಿನಲ್ಲಿ 19 ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ತಿ ಆಗಬೇಕಾಗಿದೆ, ಎರಡು ವರ್ಷಗಳ ಹಿಂದೆ ರಾಜೂರಿನಲ್ಲಿ ಶುದ್ಧ ನೀರಿನ ಘಟಕವನ್ನು ನೀರಿನ ಅನುಕೂಲವಿಲ್ಲದ ಕಡೆ ಸ್ಥಾಪಿಸಿ, ಕುಡಿಯವ ನೀರಿನ ವ್ಯವಸ್ಥೆ ಮಾಡಿಲ್ಲ, ನೀರಿನ ಸಂಪರ್ಕಕ್ಕೆ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಾನುವಾರು ಮಾರುಕಟ್ಟೆಯನ್ನು 20 ದಿನದೊಳಗಾಗಿ ರೈತರಿಗೆ ಅನುಕೂಲವಾಗುವ ಹಾಗೆ ಸಜ್ಜುಗೊಳಿಸಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಎಪಿಎಂಸಿ ಕಾರ್ಯದರ್ಶಿಗೆ ಸೂಚನೆ ನೀಡಿದರು.

ನಗರಸಭೆಯಲ್ಲಿ ಈ-ಖಾತೆ ಸಂಬಂಧ ಹೆಚ್ಚು ದೂರುಗಳು ಬರುತ್ತಿದ್ದು, ದಲ್ಲಾಳಿಗಳ ಹಾವಳಿಯನ್ನು ತಡೆಯಲು ಸಾಕಷ್ಟು ಬಾರಿ ನಿಮಗೆ ಸೂಚನೆ ನೀಡಿದ್ದರು ಸಹ, ನಿಯಂತ್ರಿಸುವಲ್ಲಿ ನೀವು ವಿಫಲರಾಗಿದ್ದೀರಿ, ನಿಮಗೆ ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದಲ್ಲಿ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು ಎಂದು ನಗರಸಭಾ ಆಯುಕ್ತ ವಿಜಯ್ ಅವರ ಮೇಲೆ ಹರಿಹಾಯ್ದರು.

ತಾಪಂ ಇಒ ಜೆರಾಲ್ಡ್ ರಾಜೇಶ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್, ಟಿಎಪಿಸಿಎಂ ಎಸ್ ಅಧ್ಯಕ್ಷ ಕುರಹಟ್ಟಿಕೆ.ಜಿ.ಮಹೇಶ್, ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ.ಮಾರುತಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಚೆನ್ನಪ್ಪ, ನಗರಸಭಾ ಆಯುಕ್ತ ವಿಜಯ್, ಬಿಇಒ ಮಹೇಶ್, ಸಿಪಿಐ ಆನಂದ್, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.