ಹೋರಾಟಗಾರರ ಮೇಲಿನ ದೂರು ವಾಪಸ್‌ಗೆ ಆಗ್ರಹ

| Published : Sep 28 2024, 01:18 AM IST

ಸಾರಾಂಶ

ಕಾನೂನಿನ ರೀತಿಯ ಹೋರಾಟಗಳಿಗೆ ಚೌಕಟ್ಟಿನಲ್ಲಿ ಪೊಲೀಸ್ ಇಲಾಖೆಗೂ ಲಿಖಿತವಾಗಿ ತಿಳಿಸಲಾಗಿತ್ತು. ಆದರೆ ಎಲ್ಲಿಯೂ ಹೋರಾಟಗಾರರು ಸಣ್ಣ ತಪ್ಪು ಆಗದಂತೆ ನೋಡಿಕೊಂಡಿದ್ದಾರೆ.

ಅಂಕೋಲಾ: ಶಿರೂರು ಗುಡ್ಡ ಕುಸಿತದ ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಇತ್ತೀಚೆಗೆ ಹೊನ್ನಾವರದಲ್ಲಿ ನಡೆದ ಶಾಂತಿಯುತ ಪ್ರತಿಭಟನೆ ವೇಳೆ ಹೋರಾಟಗಾರರ ಮೇಲೆ ಸ್ವಯಂಪ್ರೇರಿತ ದೂರು ದಾಖಲಾಗಿಸಲಾಗಿದ್ದು, ಕೂಡಲೇ ಅದನ್ನು ಹಿಂಪಡೆಯಬೇಕೆಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ತಾಲೂಕು ಘಟಕ ತಹಸೀಲ್ದಾರರಿಗೆ ಆಗ್ರಹಿಸಿದೆ.

ಸೆ. 12ರಂದು ಎನ್‌ಎಚ್ಎಐ ಕಚೇರಿಯಿರುವ ಹೊನ್ನಾವರದಲ್ಲಿ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಪಾದಯಾತ್ರೆ ಮಾಡಿ ಮನವಿ ಸಲ್ಲಿಸಲಾಗಿತ್ತು. ಆದರೂ ಪೊಲೀಸರು ಅನಗತ್ಯ ದೂರು ದಾಖಲಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಅಧ್ಯಕ್ಷ ದಾಮೋದರ ಜಿ. ನಾಯ್ಕಆರೋಪಿಸಿದರು.ಕಾನೂನಿನ ರೀತಿಯ ಹೋರಾಟಗಳಿಗೆ ಚೌಕಟ್ಟಿನಲ್ಲಿ ಪೊಲೀಸ್ ಇಲಾಖೆಗೂ ಲಿಖಿತವಾಗಿ ತಿಳಿಸಲಾಗಿತ್ತು. ಆದರೆ ಎಲ್ಲಿಯೂ ಹೋರಾಟಗಾರರು ಸಣ್ಣ ತಪ್ಪು ಆಗದಂತೆ ನೋಡಿಕೊಂಡಿದ್ದಾರೆ. ಪ್ರಣವಾನಂದ ಸ್ವಾಮೀಜಿ, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಯುವ ಘಟಕದ ರಾಜ್ಯಾಧ್ಯಕ್ಷ ಸಚಿನ ನಾಯ್ಕ ಹೊನ್ನಾವರ, ಜನಪರ ಹೋರಾಟಗಾರ ನಾಗೇಶ ನಾಯ್ಕ ಕಾಗಾಲ ಸೇರಿ 8 ಜನರ ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ ಎಂದರು. ಹೀಗಾಗಿ ಈ ಪ್ರಕರಣವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಜಗುಣಿ, ಉಪಾಧ್ಯಕ್ಷರಾದ ರಮೇಶ ಎಸ್. ನಾಯ್ಕ, ರಮೇಶ ಎನ್. ನಾಯ್ಕ, ಶ್ರೀಪಾದ ಟಿ. ನಾಯ್ಕ, ಉಮೇಶ ಎನ್. ನಾಯ್ಕ ಉಪಸ್ಥಿತರಿದ್ದರು. ತಹಸೀಲ್ದಾರ್ ಅನಂತ ಶಂಕರ ಮನವಿ ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವುದಾಗಿ ಹೇಳಿದರು.