ಸಾರಾಂಶ
ಕುಮಟಾ: ಪ್ಲೇಟ್ ಬ್ಯಾಂಕಿನಂತಹ ಸಣ್ಣ ಚಿಂತನೆಗಳ ಮೂಲಕ ಪರಿಸರಕ್ಕೆ ಸಾಕಷ್ಟು ಪೂರಕ ಕೊಡುಗೆ ನೀಡಬಹುದೆಂಬುದನ್ನು ಅದಮ್ಯ ಚೇತನ ಸಂಸ್ಥೆ ಸಾಬೀತು ಮಾಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಗೋರೆಯ ಕೆನರಾ ಎಕ್ಸಲೆನ್ಸ್ ಕಾಲೇಜಿನಲ್ಲಿ ಮಂಗಳವಾರ ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಮತ್ತು ಇಲ್ಲಿನ ಜಿ.ಎನ್. ಹೆಗಡೆ ಟ್ರಸ್ಟ್ ಸಹಯೋಗದಲ್ಲಿ ‘ಅನಂತ ಪ್ಲೇಟ್ ಬ್ಯಾಂಕ್’ ಉದ್ಘಾಟಿಸಿ ಹಾಗೂ ‘ಅನಂತ ಪಥ’ ಪತ್ರಿಕೆಯ ೫೨ನೇ ಸಂಚಿಕೆಯ ಬಿಡುಗಡೆಗೊಳಿಸಿ ಮಾತನಾಡಿದರು. ಜಿ.ಎನ್. ಹೆಗಡೆ ಟ್ರಸ್ಟ್ ಮೂಲಕ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ಅವರು ಉತ್ತರ ಕನ್ನಡ ಮಾತ್ರವಲ್ಲದೇ ಇತರ ಜಿಲ್ಲೆಯ ಮಕ್ಕಳಿಗೂ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತಿರುವುದು ಅಭಿನಂದನಾರ್ಹ. ಅವರು ಕಳೆದ ೩೦ ವರ್ಷಗಳಿಂದ ಆರೋಗ್ಯ ಕ್ಷೇತ್ರಕ್ಕೂ ನೀಡಿದ ಕೊಡುಗೆಯೂ ಅಪಾರ. ಅವರ ಸಮಾಜಮುಖಿ ಕಾರ್ಯ ಹೀಗೆ ಮುಂದುವರಿಯಲಿ ಎಂದರು. ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಭಾರತೀಯ ಚಿಂತನೆಗಳು ಜಗತ್ತಿಗೆ ಶಾಂತಿ ಮತ್ತು ಸುಖದ ಮಂತ್ರವನ್ನು ಕೊಟ್ಟಿದೆ. ಹೀಗಾಗಿ ನಾವೆಲ್ಲರೂ ಸಮಾಜಕ್ಕಾಗಿ ಬದುಕುವ ಅಗತ್ಯತೆ ಇದ್ದು, ಸ್ವಚ್ಛತೆಯ ಕಡೆಗೆ ನಮ್ಮ ಜೀವನ ಶೈಲಿಯ ಸಣ್ಣ ಬದಲಾವಣೆಯೂ ದೊಡ್ಡ ಫಲ ನೀಡಬಹುದು. ಗ್ಲೋಬಲ್ ವಾರ್ಮಿಂಗ್ ಜಗತ್ತಿನ ಅತಿ ದೊಡ್ಡ ಸಮಸ್ಯೆ. ಸಮುದ್ರದ ಉಪ್ಪಿನಲ್ಲೂ ಪ್ಲಾಸ್ಟಿಕ್ ಸಿಗುತ್ತಿದೆ. ಇದನ್ನು ಸರಿಪಡಿಸುವ ಶಕ್ತಿ ಮತ್ತು ಹೊಣೆಗಾರಿಕೆಯೆರಡೂ ಮನುಷ್ಯರದ್ದೇ ಆಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ಲೇಟ್ ಬ್ಯಾಂಕ್‌ಗಳನ್ನು ಸ್ಥಾಪಿಸುತ್ತಿದ್ದೇವೆ. ಪ್ರಕೃತಿಗೆ ನಾವು ನೀಡುವ ಕೊಡುಗೆ ಮುಂದಿನ ಪೀಳಿಗೆಗೆ ವರವಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಅದಮ್ಯ ಚೇತನ ಸಂಸ್ಥೆಯವರ ಅನಂತ ಪ್ಲೇಟ್ ಬ್ಯಾಂಕ್ ಎಂಬ ಪರಿಕಲ್ಪನೆ ಅತ್ಯುತ್ತಮವಾಗಿದೆ. ಜಿ.ಎನ್. ಹೆಗಡೆ ಟ್ರಸ್ಟ್‌ನ ಎಲ್ಲ ಸಮಾಜಮುಖಿ ಕಾರ್ಯಗಳಿಗೆ ಸದಾ ಸಹಕಾರವಿದೆ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ಮಂಗಲಾ ನಾಯಕ ಮಾತನಾಡಿದರು. ಪ್ಲೇಟ್ ಬ್ಯಾಂಕ್ ನಿರ್ವಾಹಕಿ ಪುರಸಭಾ ಸದಸ್ಯೆ ಪಲ್ಲವಿ ಮಡಿವಾಳ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಅನಂತ ಹೆಗಡೆ ಆಶೀಸರ, ಪ್ರದೀಪ ಓಕ್, ಡಿ.ಎನ್. ಭಟ್ಟ, ಪ್ರಾಚಾರ್ಯ ರಾಮ ಭಟ್ಟ ಪಿ., ಆಡಳಿತಾಧಿಕಾರಿ ಶಶಾಂಕ ಶಾಸ್ತ್ರಿ ಇದ್ದರು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಮತ್ತು ಭಗವದ್ಗೀತಾ ಪಠಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಜಿ.ಎನ್. ಹೆಗಡೆ ಟ್ರಸ್ಟ್ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಪ್ಲೇಟ್ ಬ್ಯಾಂಕ್ ಸಂಚಾಲಕ ಡಾ. ಸುರೇಶ ಹೆಗಡೆ ವಂದಿಸಿದರು. ಉಪನ್ಯಾಸಕಿ ಪೂಜಾ ಭಟ್ಟ ನಿರೂಪಿಸಿದರು.