- ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆ ಪೂರ್ವಸಿದ್ಧತಾ ಸಭೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಫೆ.22ರಿಂದ 25ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಜಾತ್ರೆಯಲ್ಲಿ ಪ್ರಾಣಿಬಲಿ, ಮದ್ಯಪಾನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೇ, ಬ್ಯಾನರ್ ಅಳ‍ವಡಿಕೆಗೆ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಬಳಿ ದೇವಸ್ಥಾನ ಸಭಾಂಗಣದಲ್ಲಿ ಸೋಮವಾರ ಜಾತ್ರೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲಾಡಳಿತ ನಿರ್ಧಾರಕ್ಕೆ ಸಾರ್ವಜನಿಕರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಾತ್ರೆ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಟ್ಟು 5 ಸಭೆ ನಡೆಸಲಾಗಿದೆ. ಹಿಂದಿನ ಜಾತ್ರೆ ಅನುಭವದ ಆಧಾರದಲ್ಲಿ ಪೊಲೀಸ್ ಅಧಿಕಾರಿಗಳು, ಧರ್ಮದರ್ಶಿಗಳು ನೀಡಿದ ಸಲಹೆ ಈ ಸಲ ಜಾರಿಗೆ ತರುತ್ತೇವೆ ಎಂದು ಹೇಳಿದರು.

ದೇವಸ್ಥಾನ ಸುತ್ತಮುತ್ತಲ 500 ಮೀಟರ್ ವ್ಯಾಪ್ತಿಯಲ್ಲಿ ಸುಮಾರು ವರ್ಷಗಳಿಂದ ಸ್ವಚ್ಛತೆ ಕಾಣದ ಚರಂಡಿಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆಯಲ್ಲಿ 100 ಟ್ರಕ್‌ನಷ್ಟು ಹೂಳು ತೆಗೆಯಲಾಗಿದೆ. ಬಾರ್ ಲೈನ್‌, ರೇಣುಕಾ ಮಂದಿರ ರಸ್ತೆ, ಡಬಲ್ ರೋಡ್ ಚರಂಡಿಗಳಲ್ಲಿ ನೀರು ಉಕ್ಕಿ ಹರಿಯದಂತೆ ಕ್ರಮ ಕೈಗೊಂಡು, ಚರಂಡಿ ಸರಿಪಡಿಸಲಾಗಿದೆ. ಬೆಸ್ಕಾಂನಿಂದ ವಿದ್ಯುತ್ ಮಾರ್ಗಗಳ ತೊಂದರೆ ಸರಿಪಡಿಸಿವೆ. ತೆರೆದಿದ್ದ ಟ್ರಾನ್ಸ್‌ಫಾರ್ಮರ್‌ಗಳನ್ನು ಮುಚ್ಚಿಸಿ, ರಕ್ಷಣೆ ಒದಗಿಸಿದೆ. ಆರೋಗ್ಯ ಇಲಾಖೆ ಮೂಲಕ ಸೊಳ್ಳೆಗಳ ಕಾಟವಿಲ್ಲದಂತೆ ಮತ್ತು ನೀರು ನಿಲ್ಲದಂತೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.


ಜಿಲ್ಲಾ ಎಸ್‌ಪಿ ಅವರೊಂದಿಗೆ ಸುಗಮ ಸಂಚಾರಕ್ಕಾಗಿ 2 ಸಲ ಸ್ಥಳ ಪರಿಶೀಲಿಸಿದ್ದೇವೆ. ದೇವಸ್ಥಾನ ಸುತ್ತಮುತ್ತಲಿನ ದೇವಸ್ಥಾನ ಮತ್ತು ಕಳೆದ ಬಾರಿ ಬಿಟ್ಟುಹೋಗಿದ್ದ ದೇವಸ್ಥಾನಗಳಿಗೆ ಬಣ್ಣ ಬಳಿಯುವ ಕೆಲಸ ನಡೆದಿದ್ದು, 2 ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಛತ್ರಪತಿ ಶಿವಾಜಿ ಮಹಾರಾಜ, ಸಂಗೊಳ್ಳಿ ರಾಯಣ್ಣ ಪ್ರತಿಮೆಗಳಿಗೆ ಜಲಪ್ರೋಕ್ಷಣೆ ಮಾಡಿ ಸ್ವಚ್ಛಗೊಳಿಸಲು ಆದೇಶಿಸಲಾಗಿದೆ, ಸ್ವಚ್ಛತಾ ಕಾರ್ಯ ಮುಗಿದ ನಂತರ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಡಿಸಿ ವಿವರಿಸಿದರು.

ಸುರಕ್ಷತಾ ದೃಷ್ಟಿಯಿಂದ ದುಗ್ಗಮ್ಮನ ಗುಡಿ ಸುತ್ತಮುತ್ತ ಎಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಉಪ ನಿರ್ದೇಶಕರನ್ನು ನೋಡಲ್ ಅಧಿಕಾರಿಗಳು, ಚೌಡೇಶ್ವರಿ ದೇವಸ್ಥಾನ, ವಿನೋಬ ನಗರ ಸುತ್ತಮುತ್ತ ನೋಡಲ್ ಅಧಿಕಾರಿಗಳು ಮತ್ತು ಕಾಯಿಪೇಟೆ ಮತ್ತು ವಸಂತ ಟಾಕೀಸ್ ಪ್ರದೇಶದ ಬಳಿ ಪಾಲಿಕೆ ಆಯುಕ್ತರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಈ ಅಧಿಕಾರಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರಕ್ಷತಾ ಕ್ರಮಗಳನ್ನು ವಹಿಸುವರು ಎಂದು ಹೇಳಿದರು.

ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ದುಗ್ಗಮ್ಮನ ದೇವಸ್ಥಾನದ ಸುತ್ತಮುತ್ತಲ ದೇವಸ್ಥಾನಗಳಿಗೆ ₹51 ಲಕ್ಷ ವೆಚ್ಚದಲ್ಲಿ ಬಣ್ಣ ಬಳಿಸಲಾಗುತ್ತಿದೆ. ದೇವಸ್ಥಾನದ ಬಳಿ 24 ಗಂಟೆ ಕುಡಿಯುವ ನೀರು, 30 ಸ್ವಚ್ಛತಾ ಸಿಬ್ಬಂದಿ ನೇಮಕ, ಉರುಳು ಸೇವೆ ಮಾಡುವಲ್ಲಿ ಮರಳು, ಸ್ನಾನಕ್ಕೆ 20 ನಳಗಳ ವ್ಯವಸ್ಥೆ ಮಾಡಿದ್ದು, ₹11 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಚೌಡೇಶ್ವರಿ ನಗರ, ವಿನೋಬ ನಗರ ಸುತ್ತಮುತ್ತಲಿನ ರಸ್ತೆ ಗುಂಡಿ ಮುಚ್ಚಲಾಗಿದೆ. ಒಳಚರಂಡಿ ವ್ಯವಸ್ಥೆ ದುರಸ್ತಿಪಡಿಸಲಾಗಿದೆ. ಗುಡಿ ಬಳಿ, ಸಂಗೊಳ್ಳಿ ರಾಯಣ್ಣ ಸರ್ಕಲ್, ಡಾ. ಎಂ.ಸಿ. ಮೋದಿ ವೃತ್ತ, ನಗರಕ್ಕೆ ಪ್ರವೇಶಿಸುವ ರಸ್ತೆ, ಪಾಲಿಕೆ ಕಚೇರಿ, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್‌ಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ದೇವಸ್ಥಾನದ ಸುತ್ತಮುತ್ತಲು ಪಾರ್ಕಿಂಗ್ ಸ್ಥಳದಲ್ಲಿ ಶೌಚಾಲಯಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠ ಡಾ.ಶೇಖರ್ ಎಚ್. ಟೇಕನ್ನವರ್, ಸಿಇಒ ಗಿತ್ತೆ ಮಾಧವ ವಿಠಲ್ ರಾವ್, ಶ್ರೀ ದುರ್ಗಾಂಭಿಕಾ ದೇವಿ ಜಾತ್ರೆ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

- - -

(ಬಾಕ್ಸ್‌)

* ಗುಡಿ ಬಳಿ ಸಿಸಿ ಕ್ಯಾಮರಾ, ತಾತ್ಕಾಲಿಕ ಠಾಣೆ: ಎಸ್‌ಪಿ ಮಾಹಿತಿ ದಾವಣಗೆರೆ: ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಪ್ರಯುಕ್ತ ದೇವಸ್ಥಾನ ಸುತ್ತಮುತ್ತ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಸರಗಳ್ಳತನ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತಾ ದೃಷ್ಠಿಯಿಂದ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಎಚ್. ಟೇಕನ್ನವರ್ ಹೇಳಿದರು.

ದೇವಸ್ಥಾನ ಪಕ್ಕದಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಭಕ್ತರು, ವಿವಿಐಪಿಗಳಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಅಗತ್ಯ ಬ್ಯಾರಿಕೇಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಸುಗಮ ಸಂಚಾರ ನಡೆಸಲು ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಬ್ಯಾನರ್ ಮತ್ತು ಬಂಟಿಂಗ್ ಅಳವಡಿಸಲು ಕಡ್ಡಾಯವಾಗಿ ಅನುಮತಿ ಪಡೆದು ಅಳವಡಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪ್ರಜೋದನಾಕಾರಿ ಮತ್ತು ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಾಣಿಬಲಿ ಕುರಿತು ಹಳೆಯ ಛಾಯಾಚಿತ್ರಗಳನ್ನು ಅಪ್ ಲೋಡ್ ಮಾಡಬಾರದು. ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೆಲಸ ಮಾಡಬಾರದು ಎಂದು ಹೇಳಿದರು.

- - -

-16ಕೆಡಿವಿಜಿ23, 24.ಜೆಪಿಜಿ:

ದಾವಣಗೆರೆ ದುಗ್ಗಮ್ಮ ಜಾತ್ರೆ ಅಂಗವಾಗಿ ನಡೆದ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿದರು.