ಸಾರಾಂಶ
ಹೆಚ್ಚಿನ ಅಂಗಡಿ, ಹೊಟೇಲ್‌ಗಳು ಬೆಳಗ್ಗಿನ 10 ಗಂಟೆ ವರೆಗೆ ತೆರೆದೇ ಇದ್ದರೂ ಬಳಿಕ ಕಾರ್ಯಕರ್ತರ ಮನವಿಗೆ ಸ್ಪಂದಿಸಿ ಸಂಪೂರ್ಣ ಬಂದ್ ನಡೆಸಿದವು. ಗ್ರಾಮೀಣ ಭಾಗದ ಅಂಗಡಿಗಳು ಸಂಪೂರ್ಣ ಮುಚ್ಚಿದ್ದವು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವಿಶ್ವ ಹಿಂದೂ ಪರಿಷತ್ ನೀಡಿದ್ದ ಬಂದ್ ಕರೆಗೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹೆಚ್ಚಿನ ಅಂಗಡಿ, ಹೊಟೇಲ್‌ಗಳು ಬೆಳಗ್ಗಿನ 10 ಗಂಟೆ ವರೆಗೆ ತೆರೆದೇ ಇದ್ದರೂ ಬಳಿಕ ಕಾರ್ಯಕರ್ತರ ಮನವಿಗೆ ಸ್ಪಂದಿಸಿ ಸಂಪೂರ್ಣ ಬಂದ್ ನಡೆಸಿದವು. ಗ್ರಾಮೀಣ ಭಾಗದ ಅಂಗಡಿಗಳು ಸಂಪೂರ್ಣ ಮುಚ್ಚಿದ್ದವು.
ಇತರ ಜಿಲ್ಲೆಗಳಿಗೆ ಪ್ರಯಾಣಿಸುವ ಕೆಎಸ್ಸಾರ್ಟಿಸಿ ಬಸ್ ಸೇವೆಯಲ್ಲಿ ಹೆಚ್ಚಿನ ವ್ಯತ್ಯಯ ಕಂಡು ಬರಲಿಲ್ಲ.ಆ ದರೆ ಜಿಲ್ಲೆಯ ಒಳಗೆ ಹಾಗೂ ಗ್ರಾಮೀಣ ಭಾಗಗಳಿಗೆ ಸಂಚರಿಸುವ ಬಸ್ ಗಳು ಸೇವೆ ಮೊಟಕುಗೊಳಿಸಿದವು. ಧರ್ಮಸ್ಥಳದಿಂದ ಸುಬ್ರಮಣ್ಯಕ್ಕೆ ವಿರಳ ಸಂಖ್ಯೆಯ ಬಸ್ ಓಡಾಟ ಕಂಡು ಬಂತು. ಹೆಚ್ಚಿನ ಖಾಸಗಿ ಬಸ್ ಗಳು ಬಂದ್ ಗೆ ಉತ್ತಮ ಸ್ಪಂದನೆ ನೀಡಿದವು. ಬಾಡಿಗೆ ರಿಕ್ಷಾ , ಜೀಪು, ಕಾರುಗಳು ಬಂದ್‌ಗೆ ಬೆಂಬಲ ಸೂಚಿಸಿದವು.ಸ್ಥಳೀಯರ ಸಹಿತ ಅನೇಕ ಪ್ರವಾಸಿಗರು ವಾಹನಗಳ ವ್ಯವಸ್ಥೆ ಇಲ್ಲದೆ ಪರದಾಟ ನಡೆಸುವುದು ಕಂಡುಬಂತು.ಹೆಚ್ಚಿನ ಸಹಕಾರಿ ಸಂಘಗಳು ವ್ಯವಹಾರ ನಡೆಸಲಿಲ್ಲ.
ಬಸ್ಸಿಗೆ ಕಲ್ಲು ತೂರಾಟ:ಬೆಳ್ತಂಗಡಿಯಿಂದ ಉಪ್ಪಿನಂಗಡಿ ಕಡೆ ಸಂಚರಿಸುತ್ತಿದ್ದ ಖಾಸಗಿ ಸರ್ವಿಸ್ ಬಸ್ ಗೆ ಗುರುವಾಯನಕೆರೆಯ ಜೈನ್ ಪೇಟೆ ಬಳಿ ಕಲ್ಲುತೂರಾಟ ನಡೆಸಿದ ಪ್ರಸಂಗ ನಡೆಯಿತು. ಬಸ್ಸಿನ ಮುಂಭಾಗದ ಗಾಜಿಗೆ ತಾಗಿದೆ. ಪ್ರಯಾಣಿಕರಿಗೆ ಯಾವುದೇ ಅಪಾಯ ಉಂಟಾಗಿಲ್ಲ. ರೇಷ್ಮೆ ರೋಡ್, ಮುಂಡಾಜೆ, ಕಕ್ಕಿಂಜೆ ಇನ್ನಿತರ ಕಡೆಗಳಲ್ಲಿ ಟಯರ್ ಗಳನ್ನು ರಸ್ತೆ ಮೇಲೆ ಇಟ್ಟು ಬೆಂಕಿ ಹಚ್ಚಲಾಯಿತು.